ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಪಕ್ಷದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳು ಶೀಘ್ರವೇ ಬಗೆಹರಿಯಲಿದ್ದು, ಕೆಲವು ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದಲ್ಲಿರುವ ಗೊಂದಲ ಆದಷ್ಟು ಬೇಗ ಬಗೆಹರಿಯಲಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಎಂ.ಬಿ.ಪಾಟೀಲ್ ಅವರಾಗಿಯೇ ದೆಹಲಿಗೆ ಹೋಗಿದ್ದಾರೋ ಅಥವಾ ಹೈಕಮಾಂಡ್ ಅವರನ್ನು ಕರೆಸಿಕೊಂಡಿದೆಯೋ ಗೊತ್ತಿಲ್ಲ. ದಿನೇಶ್ ಗುಂಡೂರಾವ್ ಕೂಡ ಯಾವ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ ಎಂಬುದು ತಿಳಿದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಸಚಿವ ಆರ್.ವಿ.ದೇಶಪಾಂಡೆ, ನಂತರ ಸುದ್ದಿಗಾರರ ಜತೆ ಮಾತನಾಡಿ, ಸಂಪುಟ ರಚನೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಹಲವರು ಆಕಾಂಕ್ಷಿಗಳು ಇರುತ್ತಾರೆ, ಅವಕಾಶ ಸಿಗದೇ ಇ¨ªಾಗ ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಎಲ್ಲರನ್ನೂ ಮನವೊಲಿಸುವ ಕೆಲಸ ನಡೆಯುತ್ತಿದೆ. ಒಂದೇ ಪಕ್ಷದ ಸರ್ಕಾರ ಇರುವಾಗಲೇ ಇವೆಲ್ಲ ಸಮಾನ್ಯ, ಇನ್ನು ಸಂಮಿಶ್ರ ಸರ್ಕಾರದಲ್ಲಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ನನಗೂ ಸಚಿವ ಸ್ಥಾನ ಕೊಟ್ಟಿರಲಿಲ್ಲ: ಮತ್ತೂಂದೆಡೆ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಡಿ.ಕೆ.ಶಿವಕುಮಾರ್ ಅವರ ಮನೆ ಮುಂದೆ ಪ್ರತಿಭಟಿಸಿ, ಮನವಿ ಸಲ್ಲಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಮುನಿಯಪ್ಪ ಅವರನ್ನು ಪಕ್ಷ ಗಮನದಲ್ಲಿ ಇಟ್ಟಿಕೊಂಡಿದೆ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು, ಪಕ್ಷದ ಅಧ್ಯಕ್ಷರು ಗಮನಹರಿಸುತ್ತಾರೆ ಎಂದು ಹೇಳಿದರು.
ಧರ್ಮಸಿಂಗ್ ಅವರ ಅವಧಿಯಲ್ಲಿ ನನಗೆ ಸಚಿವ ಸ್ಥಾನ ನೀಡಿರಲಿಲ್ಲ, ಸಿದ್ದರಾಮಯ್ಯ ಅವರು ಸಿಎಂ ಆದ ನಂತರ ಆರು ತಿಂಗಳವರೆಗೆ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಆದರೆ, ಮುಂದೆ ಪಕ್ಷ ಒಳ್ಳೆಯ ಸ್ಥಾನಮಾನ ನೀಡಿದೆ. ಹೀಗಾಗಿ ಮುನಿಯಪ್ಪ ಅವರಿಗೂ ಒಳ್ಳೆಯ ಹುದ್ದೆ ಸಿಗುತ್ತದೆ. ಹೆಚ್ಚುವರಿ ಖಾತೆ ಹಿಂಪಡೆದು ಸಂಪುಟ ಪುನರ್ ರಚನೆ ಮಾಡುವಾಗ ಬೇರೆಯವರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಬಿಜೆಪಿ ಅಧಿಕಾರದಲ್ಲಿ ಇರಬಾರದು ಎಂದು ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ರಚನೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕ್ಷಣಿಕ ಮಾತ್ರ.
-ಜಾಫರ್ ಷರೀಫ್, ಕಾಂಗ್ರೆಸ್ ಹಿರಿಯ ಮುಖಂಡ