ಬೆಂಗಳೂರು: ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿನ ರೂವಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಇಷ್ಟು ದಿನವಾದರೂ ಈ ಅಕ್ರಮ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಆಯೋಗಕ್ಕೆ ಈ ಕುರಿತು ಮೊದಲೇ ಮಾಹಿತಿ ಇತ್ತು. ಚುನಾವಣಾ ಆಯೋಗದವರು ಬಿಬಿಎಂಪಿಗೆ ಈ ಕುರಿತು ಪತ್ರಗಳನ್ನೂ ಬರೆದಿದ್ದರು. ಆದರೂ ಆಯೋಗಕ್ಕೂ ಕೇರ್ ಮಾಡದೆ ಚಿಲುಮೆ ಸಂಸ್ಥೆಯ ಅಕ್ರಮ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ಚುನಾವಣಾ ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೆ? ಸುಪ್ರೀಂ ಕೋರ್ಟು ಚುನಾವಣಾ ಆಯೋಗದ ಮೇಲೆ ಮಾಡಿರುವ ವಿಮರ್ಶೆಗಳು ಸರಿಯಾಗಿವೆ ಅಲ್ಲವೆ? ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಹೊಂಗಸಂದ್ರದ ಬಿಜೆಪಿಯ ಕಚೇರಿಯಲ್ಲಿ ಹಾಲಿ ಶಾಸಕರು ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಸತೀಶ್ ರೆಡ್ಡಿಯವರ ನೇತೃತ್ವದಲ್ಲಿಯೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಕುರಿತು ತರಬೇತಿ ನೀಡಲಾಗಿದೆ. ಪರಿಷ್ಕರಣೆ ಕಾರ್ಯಕ್ಕಾಗಿಯೆ 25000 ದಿಂದ 30000 ರೂಪಾಯಿಗಳನ್ನು ನೀಡಿ ನೇಮಕಾತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ನೂರಾರು ಸಂಖ್ಯೆಯ ನೌಕರರಿಗೆ ಸಂಬಳ ಕೊಡಲು ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ಈ ಸಂಸ್ಥೆಗೆ ನೀಡಿದವರು ಯಾರು? ಇಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿದ್ದವರ ಉದ್ದೇಶವಾದರೂ ಏನು? ಅಕ್ರಮವಾಗಿ ವಿನಿಯೋಗಿಸಿದ ಹಣದ ಕುರಿತು ಇನ್ನೂ ದಾಳಿಗಳನ್ನು ನಡೆಸದೆ ಐಟಿ, ಇಡಿಗಳು ಯಾಕೆ ಕಣ್ಣು ಮುಚ್ಚಿಕೊಂಡಿವೆ ?
Related Articles
ಬಿಬಿಎಂಪಿಯಲ್ಲಿ ನಡೆದಿರುವ ಮತದಾರರ ಪಟ್ಟಿಯ ಅಕ್ರಮಕ್ಕೆ ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ ಎಂದು ಹೇಳಿದ್ದಾರೆ.
ಆದರೂ ಇಷ್ಟು ಬೃಹತ್ ಮಟ್ಟದ ಹಗರಣ ನಡೆದಿದ್ದರೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿಯ ಎಂಎಲ್‍ಎಗಳು, ಸಚಿವರುಗಳ ಮೇಲೆ ಮತ್ತು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳ ಮೇಲೆ ಏಕೆ ಯಾವುದೇ ಕ್ರಮ ವಹಿಸಿಲ್ಲ? ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ/ಅರೆ ಸರ್ಕಾರಿ ನೌಕರರನ್ನು ನೇಮಿಸುವುದರ ಬದಲಿಗೆ ಖಾಸಗಿ ವ್ಯಕ್ತಿಗಳನ್ನು ಬಿಎಲ್‍ಓ ಗಳಾಗಿ ನೇಮಕ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳನ್ನು ಯಾವ ಕಾರಣಕ್ಕೂ ನೇಮಕ ಮಾಡಬಾರದೆಂದು ಕಾನೂನು ಹೇಳುತ್ತದೆ. ಇವರು ಒಂದು ಪಕ್ಷದ ಕಾರ್ಯಕರ್ತರಂತೆ ಕಾಣಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಚಿಲುಮೆ ಸಂಸ್ಥೆಯ ಕಚೇರಿಗಳಲ್ಲಿ ಸಚಿವರ ಚೆಕ್ಕುಗಳು ಮತ್ತು ಲೆಟರ್ ಹೆಡ್‍ಗಳು ದೊರೆತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಿದ್ದರೆ ಸದರಿ ಸಚಿವರ ಮೇಲೆ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ಸೇರಿಸಲು ಯಾವುದೇ ಅರ್ಜಿ ನಮೂನೆಗಳನ್ನು ಪಡೆಯದೆ ಈ ಕೃತ್ಯ ಎಸಗಿರುವುದು ಘೋರವಾದ ಅಪರಾಧವಾಗಿದ್ದು ಇದನ್ನು ಪ್ರತಿ ದಿನ ಸಾಕ್ಷಿಗಳ ಸಮೇತ ಜನರು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಆದ್ದರಿಂದ ಈ ಕೂಡಲೆ ಜನರು ನೀಡಿರುವ ನಮೂನೆ 6, 7, 8, ಮತ್ತು 8ಎ ಗಳ ಅರ್ಜಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯಾವುದೇ ಅರ್ಜಿಗಳಿಲ್ಲದೆ ಮತದಾರರ ಪಟ್ಟಿಗೆ ಸೇರಿಸಿರುವ, ಕೈಬಿಟ್ಟಿರುವ, ತಿದ್ದುಪಡಿ ಮಾಡಿರುವ, ವರ್ಗಾವಣೆ ಮಾಡಿರುವ ಪ್ರಕರಣಗಳೆಷ್ಟು ಎಂಬುದನ್ನು ಚುನಾವಣಾ ಆಯೋಗ ಈ ಕೂಡಲೆ ಎಲ್ಲ ರಾಜಕೀಯ ಪಕ್ಷಗಳಿಗೆ, ಸಾರ್ವಜನಿಕರಿಗೆ ತಿಳಿಸಬೇಕು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ ಮಾಡಿರುವ ಎಲ್ಲ ಬದಲಾವಣೆಗಳನ್ನು ಈ ಕೂಡಲೆ ರದ್ದು ಮಾಡಬೇಕು ಎಂದು ಹೇಳಿದ್ದಾರೆ.