Advertisement
ಕೊಡಪಾನವು ಅಂಚಿಗೆ ತಗುಲದ ಹಾಗೆ ಬಾವಿಯಿಂದ ನೀರು ಸೇದುವುದನ್ನು ಕಲಿಸಿದ ಕೆಲಸದಾಳು, ಜಾರದಂತೆ ಹಗ್ಗದ ಗಂಟು ಹಾಕಲು ಕಲಿಸಿದ ಅಪರಿಚಿತ, ಟೈ ಕಟ್ಟುವುದನ್ನು ಕಲಿಸಿದ ರೂಮ್ ಮೇಟ್ ಇವರೆಲ್ಲರೂ ಗುರುಗಳೇ!
Related Articles
Advertisement
ನಮಗೆ ಮಾತನಾಡಲು ಯಾರು ಕಲಿಸಿದವರು ಎಂದು ಗುರುತಿಸಿ ಹೇಳಲು ಸಾಧ್ಯವಿಲ್ಲ. ಅದನ್ನು ಯಾರೋ ಒಬ್ಬ ಗುರು ಕಲಿಸಿರಲು ಸಾಧ್ಯವೂ ಇಲ್ಲ. ಶಿಕ್ಷಣಶಾಸ್ತ್ರಜ್ಞ ವೈಗೋಸ್ಕಿ ಹೇಳುವ ಹಾಗೆ ಕಲಿಕೆಯೆಂಬುದು ಒಂದು ಸಾಮಾಜಿಕ ಪ್ರಕ್ರಿಯೆ. ಒಂಟಿಯಾಗಿ ಕಲಿಯಲು ಸಾಧ್ಯವಿಲ್ಲ. ಹಲವಾರು ಗುರುಗಳು ಒಬ್ಬರ ಮೇಲೆ ಒಬ್ಬರು ಪ್ರಭಾವಿಸುತ್ತಾ, ಗುರುವೂ ಆಗುತ್ತಾ ಶಿಷ್ಯನೂ ಆಗುತ್ತಾ ಕಲಿಕೆಯನ್ನು ಕಾರ್ಯಗತಗೊಳಿಸುತ್ತಿರುತ್ತಾರೆ. ತರಗತಿಕೋಣೆಯಲ್ಲೂ ಅಷ್ಟೇ, ಮೇಷ್ಟ್ರೇ ಎಲ್ಲವನ್ನೂ ಕಲಿಸಲಾರರು. ಹಾಗೆ ನೋಡಿದರೆ, ಕಲಿಸುವುದು ಅವರ ಕೆಲಸವೇ ಅಲ್ಲ. ಅವರು ಕಲಿಯುವ ಪರಿಸ್ಥಿತಿಯನ್ನು ಉಂಟುಮಾಡಬಲ್ಲರು. ಕಲಿಯುವ ಪರಿಸರವನ್ನು ರೂಪಿಸಬಲ್ಲರು. ಕಲಿಕೆ ಎಂಬುದು ಸಂಕೀರ್ಣ ಬೌದ್ಧಿಕ ವ್ಯವಹಾರ. ಅಷ್ಟೇ ಸಂಕೀರ್ಣವಾಗಿರುವುದು `ಗುರು’ ಎಂಬ ವ್ಯಕ್ತಿತ್ವ.
ಒಡನಾಟವು ಕಲಿಕೆಯ ಮೂಲಮಂತ್ರ. ಕಲಿಕೆಯನ್ನು ಸಾಧ್ಯವಾಗಿಸಬಲ್ಲ ಬಹುಬಗೆಯ ಒಡನಾಟದ ಸಾಧ್ಯತೆಯನ್ನು ವಿನ್ಯಾಸಗೊಳಿಸುವುದು ಮತ್ತು ಖಾತ್ರಿಗೊಳಿಸುವುದು ಶಿಕ್ಷಕನ ಕೆಲಸ ಎಂದು ಇಂದು ನಾವು ಹೇಳುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ, ಶಿಕ್ಷಕನ ಪಾತ್ರ ಬದಲಾಗಿದೆ ಎಂದಾಗಲಿ ಗೌಣವಾಗಿದೆ ಎಂದಾಗಲಿ ತೀರ್ಮಾನಿಸಲಾಗದು. ಶಿಕ್ಷಕನ ಪಾತ್ರವನ್ನು ನಿರ್ವಚಿಸುವ ಪರಿಕರ ಮತ್ತು ಪರಿಭಾಷೆಗಳು ಬದಲಾದ ಮಾತ್ರಕ್ಕೆ ಶಿಕ್ಷಕರ ಮಹತ್ವವೇ ಕಡಿಮೆ ಆಗಿದೆ ಎಂದು ಹೇಳುವುದು ಸರಿಯಲ್ಲ.
ತರಗತಿ ಕೋಣೆಗಳು ಸ್ಮಾಟರ್ ಆದಂತೆ ಕಲಿಕೆಯಲ್ಲಿ ಶಿಕ್ಷಕರ ಅವಶ್ಯಕತೆ ಮತ್ತು ಮಹತ್ವ ಕಡಿಮೆ ಆಗುತ್ತದೆ ಎಂಬ ಇಪ್ಪತ್ತು ವರ್ಷಗಳ ಹಿಂದಿನ ಊಹೆಯು ಇಂದು ತಪ್ಪು ಎಂಬುದು ಅರಿವಾಗಿದೆ. ವರ್ಚುವಲ್ ಅನುಭವಗಳು ನೈಜ ಅನುಭವಕ್ಕೆ ಬದಲಿಯಾಗಲಾರವು. ಮನುಷ್ಯರ ಜೊತೆ ಒಡನಾಟಗಳನ್ನು ಕಡಿಮೆ ಮಾಡುವ ಮೂಲಕ ಯಾವ ತರಗತಿ ಕೋಣೆಯೂ ಸ್ಮಾಟರ್ ಆಗಲು ಸಾಧ್ಯವಿಲ್ಲ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳ ನಡುವೆ, ವಿದ್ಯಾರ್ಥಿ ಮತ್ತು ಕಂಪ್ಯೂಟರ್ ಸೇರಿದಂತೆ ಹಲಬಗೆಯ ಕಲಿಕೆಯನ್ನು ಬೆಂಬಲಿಸುವ ಉಪಕರಣಗಳ ನಡುವೆ, ವಿದ್ಯಾರ್ಥಿ ಮತ್ತು ಪುಸ್ತಕಗಳ ನಡುವೆ, ವಿದ್ಯಾರ್ಥಿ ಮತ್ತು ಹೊರ ಜಗತ್ತಿನ ನಡುವೆ ಒಡನಾಟಗಳು ನಡೆಯುತ್ತಾ ಹೋದಂತೆ ಜ್ಞಾನದ ಉತ್ಪಾದನೆ ಉಂಟಾಗುತ್ತದೆ. ಗೀತೆ, ಉಪನಿಷತ್ತುಗಳೂ ಸೇರಿದಂತೆ ಬಹುತೇಕ ಭಾರತೀಯ ಜ್ಞಾನ ಮೀಮಾಂಸೆಗಳು ಶಿಷ್ಯನು ಗುರುವನ್ನು ಪ್ರಶ್ನಿಸುವ ಮೂಲಕ ಆರಂಭಗೊಳ್ಳುತ್ತವೆ. ಕಲಿಕೆ ಹೇಗೆ ಸಾಗಬೇಕು ಎಂಬ ಸೂಚನೆಯಂತಿರುವ ಈ ಸಂವಾದಗಳು ತರಗತಿಕೋಣೆಯಲ್ಲಿ ಇನ್ನಷ್ಟು ವಿಸ್ತಾರಗೊಳ್ಳುತ್ತವೆ. ಪೂರ್ವಯೋಜಿತವಲ್ಲದ ಆದರೆ, ಕಲಿಕೆಗೆ ಪೂರಕವಾಗಿರುವ ಪ್ರಶ್ನೆಗಳ ಮೂಲಕ ಜ್ಞಾನದ ರಚನೆಯ ಕ್ರಿಯೆ ಸಾಗುತ್ತದೆ.
ಗುರುವು ಎಲ್ಲೆಡೆಯೂ ಇರುತ್ತಾರೆ. ವಾಹನ ಚಾಲನೆ, ಹೊಲಿಗೆ, ಕಮ್ಮಾರಿಕೆ, ಕುಂಬಾರಿಕೆ ಮತ್ತಿತರ ಶ್ರಮ ಮತ್ತು ಕೌಶಲದ ತಿಳುವಳಿಕೆಯಿಂದ ಹಿಡಿದು ನಾಟಕ, ಸಂಗೀತ ಮತ್ತಿತರ ಪ್ರದರ್ಶನ ಕಲೆಗಳ ವರೆಗೆ, ಇಸ್ರ್ತಿ ಮಾಡುವುದರಿಂದ ಗ್ಯಾಸ್ ಬುಕಿಂಗ್ ಮಾಡುವುದರ ವರೆಗೆ ಬದುಕಿನ ಪ್ರತಿ ಹಂತದಲ್ಲೂ ಕಲಿಕೆ ಇದ್ದೇ ಇದೆ. ಕಲಿಕೆಯಿದೆ ಎಂದರೆ ಗುರುವೂ ಇದ್ದಾರೆ.
ಅದೃಷ್ಟವಶಾತ್, ನಮ್ಮ ಬದುಕನ್ನು ಪ್ರಭಾವಿಸಿದ ಈ ಎಲ್ಲ ಗುರುಗಳೂ ನಮ್ಮೊಳಗೆ ಇದ್ದಾರೆ. ನಮಗರಿವಿಲ್ಲದಂತೆ ನಮ್ಮೊಳಗೆ ಸಾವಯವ ರೂಪ ಪಡೆದು ಕೆಲವೊಮ್ಮೆ ಎದುರಾಗುತ್ತಾರೆ. ಕೆಲವೊಮ್ಮೆ ನಮ್ಮೊಳಗೆ ವಿಲೀನವಾಗುತ್ತಾರೆ. ಆದರೆ, ನಮ್ಮಿಂದ ಮರೆಯಾಗುವುದಿಲ್ಲ.
ಉದಯ ಗಾಂವಕರ,
ಶಿಕ್ಷಕರು, ಕುಂದಾಪುರ