Advertisement

ಅಳಿಯೂರು ಶಾಲೆಗೆ ಕಾಯಕಲ್ಪ : ವಿದ್ಯಾರ್ಥಿ ಸಂಖ್ಯೆಯಲ್ಲಿ ಹೆಚ್ಚಳ

11:14 PM Jan 14, 2021 | Team Udayavani |

ಮೂಡುಬಿದಿರೆ:  ಅಳಿಯೂರು ಸ. ಹಿ. ಪ್ರಾ.ಶಾಲೆಗೆ ಎಸ್‌ಡಿಎಂಸಿ, ಪೋಷಕರು, ವಿದ್ಯಾಭಿಮಾನಿಗಳ ಸಹಿತ ರೂಪುಗೊಂಡ ಸಮನ್ವಯ ಸಮಿತಿ ಮೂಲಕ ಕಾಯಕಲ್ಪ ನಡೆಯುತ್ತಿದೆ. ಹಲವು ಪರಿಣಾಮಕಾರಿ ಕ್ರಮಗಳಿಂದಾಗಿ ಇಳಿಮುಖವಾಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಕಂಡುಬಂದಿದೆ.

Advertisement

ಸುಮಾರು 85 ವರ್ಷಗಳ ಇತಿಹಾಸ ವುಳ್ಳ ಅಳಿಯೂರು ಶಾಲೆಯಲ್ಲಿ ಮೂರು ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ 147ಕ್ಕೆ ಇಳಿಕೆಯಾದುದನ್ನು ಗಮನಿಸಿದ ಸಮನ್ವಯ ಸಮಿತಿಯವರು ಶಾಸಕರನ್ನು, ಶಿಕ್ಷಣ ಇಲಾಖೆಯ ಪ್ರಮುಖರನ್ನು ನೇರ ಬೆಂಗಳೂರಲ್ಲೇ ಭೇಟಿ ಮಾಡಿ, ಕೊನೆಗೂ 2000ದ ಪರಿಮಿತಿ ಮೀರಿ 2001ನೇ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಅನುಮತಿ ಪಡೆದರು. ಹೀಗೆ ಆರಂಭವಾದ ಎಲ್‌ಕೆಜಿ, ಯುಕೆಜಿ ಈಗ 2ನೇ ತರಗತಿಗೆ ಬಂದು ನಿಂತಿದೆ. ಈ ವಿಭಾಗಗಳಲ್ಲಿ 60-70 ಮಕ್ಕಳಿದ್ದಾರೆ, ಇನ್ನೂ ಹೆಚ್ಚುತ್ತಿದೆ. ಹಾಗಾಗಿ ಈಗಲೇ ಮಕ್ಕಳ ಸಂಖ್ಯೆ 205ರ ಗಡಿದಾಟುತ್ತಿದೆ.

ಮೊದಲಿಗೆ 50 ಸಾವಿರ ರೂ. ವೆಚ್ಚದಲ್ಲಿ ಸುಣ್ಣ ಬಣ್ಣಗಳಿಂದ ಶಾಲೆಯನ್ನು ಹೊರ ನೋಟವನ್ನು ಹೆಚ್ಚಿಸಲು ನಿರ್ಧರಿಸಲಾ ಗಿತ್ತು. ಬಳಿಕ ಎಂಜಿನಿಯರ್‌ ಸಲಹೆ ಮೇರೆಗೆ ಶಿಥಿಲಗೊಂಡ ಭಾಗಗ ಳನ್ನೆಲ್ಲ (ಇಳಿಜಾರಾದ ಗೇಬಲ್‌) ಕಿತ್ತು ಹೊಸದಾಗಿ ಸಿಮೆಂಟ್‌ಬ್ಲಾಕ್‌ನ ಗೋಡೆ ಕಟ್ಟಿ ಹೊರಕ್ಕೆ ಚಾಚುವಂತೆ ತಗಡಿನ ಶೀಟ್‌ ಹೊದೆಸಿದ್ದಲ್ಲದೆ, ಜಗಲಿಗೆ ಸಿಮೆಂಟ್‌ ಕಾಂಕ್ರೀಟ್‌, ಟೈಲ್ಸ್‌, ಹೊರಗಡೆ ಸಿಮೆಂಟ್‌ ಕಾಂಕ್ರೀಟ್‌ ಹೊದೆಸಲಾಯಿತು. ಜೀರ್ಣವಾದ ಕಿಟಿಕಿ, ಬಾಗಿಲುಗಳನ್ನು ಬದಲಾಯಿಸಲಾಯಿತು. ತರಗತಿಗಳ ಎದುರು ಆಟೋರಿಕ್ಷಾಗಳ ನಿಲುಗಡೆಗಾಗಿ ನಿರ್ದಿಷ್ಟ ಗೇಟ್‌ ವ್ಯವಸ್ಥೆ, ಶುದ್ಧವಾದ ಕುಡಿಯುವ ನೀರು, ಕೈ ತೊಳೆಯಲು ನಳ್ಳಿಗಳ ವ್ಯವಸ್ಥೆ, ಆ ಭಾಗಕ್ಕೆ ಟೈಲ್ಸ್‌ , ಆಟದ ಸಾಮಗ್ರಿ, ಆಹಾರ ಸಾಮಗ್ರಿ ಇರಿಸಲು ಒಂದು ಕೊಠಡಿ ನಿರ್ಮಾಣವಾಗಿದೆ. ಗೋಡೆಗಳಲ್ಲಿ ಮಕ್ಕಳ ಮನವರಳಿಸುವ ಚಿತ್ರಗಳನ್ನು ಮೂಡಿಸಲಾಗಿದೆ. ಶಿಕ್ಷಕರಿಗಾಗಿ ವಿಶಾಲವಾದ, ಟೈಲ್ಸ್‌ ಹಾಕಿದ, ಕಲ್ಲಿನ ರ್ಯಾಕ್‌ಗಳಿರುವ, ಶೌಚಾಲಯ ಸಹಿತ ಸುಂದರವಾದ ವಿರಾಮ ಕೊಠಡಿಯೂ ಸಿದ್ಧಗೊಳ್ಳುತ್ತಿದೆ. ಈ ಶಾಲೆಯಲ್ಲಿ ಎಂಟು ವರ್ಷಗಳಿಂದ 6ನೇ, 7ನೇ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸುತ್ತ ಬರಲಾಗಿದೆ. 8 ಮಂದಿ ಸರಕಾರಿ ಶಿಕ್ಷಕರಿದ್ದು, 3 ಮಂದಿ ಗೌರವ ಶಿಕ್ಷಕರನ್ನು ಸಮನ್ವಯ ಸಮಿತಿ ನಿಯೋಜಿಸಿದೆ. ತಿಂಗಳಿಗೆ ಗೌರವಧನಕ್ಕಾಗಿ 15 ಸಾವಿರ ರೂ.ಗಳಷ್ಟು ಮತ್ತು ಒಂದಷ್ಟು ಇತರ ವೆಚ್ಚಗಳನ್ನೂ ಭರಿಸಬೇಕಾಗಿದೆ.

ಸಮಿತಿ ಪ್ರಶಾಂತ್‌ ಎನ್‌. ಕಾರ್ಯ ದರ್ಶಿ, ಗೌರವಾಧ್ಯಕ್ಷ ಪ್ರಮೋದ್‌ ಆರಿಗಾ, ಕಾನೂನು ಸಲಹೆಗಾರ ಮಯೂರ ಕೀರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ಪಣಪಿಲ, ಧನಲಕ್ಷ್ಮೀ, ರವೀಂದ್ರ ಪೂಜಾರಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದಿನ ಮುಖ್ಯಶಿಕ್ಷಕಿ ಅನ್ನಪೂರ್ಣಾ, ಈಗಿನ ಮುಖ್ಯಶಿಕ್ಷಕಿ ನಮಿತಾ ಜೈನ್‌ ಸಹಿತ ಶಿಕ್ಷಕರು ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ.

ಶ್ರಮದಾನ :

Advertisement

ಎಲ್‌ಕೆಜಿ, ಯುಕೆಜಿ  ತರಗತಿಗಳನ್ನು ಆರಂಭಿಸುವಾಗ ಸುಮಾರು 5 ಲಕ್ಷ ರೂ. ವ್ಯಯಿಸಲಾಗಿದ್ದರೆ, ಬಳಿಕ ಸುಮಾರು 12 ಲಕ್ಷ ರೂ.ಗಳಷ್ಟು ವೆಚ್ಚದ ಕಾಮಗಾರಿಗಳಾಗಿವೆ. ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳೆಂದು ಸಂಜೆಯ ಬಳಿಕ, ರಜಾದಿನಗಳಲ್ಲಿ ತಾವಾಗಿಯೇ ಮುಂದೆ ಬಂದು ಶ್ರಮದಾನದ ಮೂಲಕ ಏನಿಲ್ಲವೆಂದರೂ 4 ಲಕ್ಷ ರೂ.ಗಳಷ್ಟರ ಕೊಡುಗೆ ನೀಡಿದ್ದಾರೆ. ಇನ್ನೂ ನಾಲ್ಕೈದು ಲಕ್ಷಗಳಷ್ಟು ಕೊರತೆ ಕಾಡುತ್ತಿದೆ. ಆದರೂ ಸಮಿತಿಯವರ ಉತ್ಸಾಹ ಕುಂದಿಲ್ಲ. ಈಗಾಗಲೇ ಮಂಜೂರಾದ ಎರಡು ಕೊಠಡಿಗಳೊಂದಿಗೆ ಮುಂದಿನ ವರ್ಷ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸುವ ಯೋಜನೆ ಇದೆ.

ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೂ ಮೀರಿದ ಆಕರ್ಷಣೆಯೊಂದಿಗೆ ಅಭಿವೃದ್ಧಿ ಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ವೃದ್ಧಿಸಲು ಸರ್ವರ ಸಹಕಾರ ಸಂಚಯಿಸಲಾಗುತ್ತಿದೆ. –ಪದ್ಮನಾಭ ಕೋಟ್ಯಾನ್‌,  ಸಮನ್ವಯ ಸಮಿತಿ ಅಧ್ಯಕ್ಷ , ಮಾಜಿ ಪಂ. ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next