ತಾಳಿಕೋಟೆ: ಫೀರಾಪುರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು ಕೇವಲ 15 ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಬಿ.ಸಾಲವಾಡಗಿ ಜಿಪಂ ವ್ಯಾಪ್ತಿಗೆ ಒಳಪಡುವ ಬಿ.ಸಾಲವಾಡಗಿ, ಕೊಡಗಾನೂರ ಹಾಗೂ ಬೇಲೂರು ಗ್ರಾಮಗಳಲ್ಲಿ ಸುಮಾರು 4.50 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಫೀರಾಪುರಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಹೆಚ್ಚುವರಿ ಹಣದ ಅವಶ್ಯಕತೆ ಇತ್ತು. ಆ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೇನೆ. ಕಾಮಗಾರಿಯೂ ಮುಕ್ತಾಯಗೊಂಡಿದೆ. 15 ದಿನಗಳಲ್ಲಿ ಈ ಯೋಜನೆಗೆ ಸಂಬಂಧಿತ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂಕೆಯಾಗಲಿದೆ. ಇದರಿಂದ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಲಿದೆ ಎಂದರು.
ಬಿ.ಸಾಲವಾಡಗಿ ಗ್ರಾಮದಲ್ಲಿ ಲೆಕ್ಕ ಶಿರ್ಷಿಕೆ 5050-03-337-0-75-059 ಯೋಜನೆ ಅಡಿ 1 ಕೋಟಿ, ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯಡಿ 1 ಕೋಟಿ ರೂ. ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೊಡಗಾನೂರ ಗ್ರಾಮದಲ್ಲಿ ಸದರಿ ಯೋಜನೆ ಅಡಿ 1 ಕೋಟಿ ರೂ. ಹಾಗೂ ಬೇಲೂರು ಗ್ರಾಮದಲ್ಲಿ 1.50 ಕೋಟಿ ರೂ. ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ದೇವರಹಿಪ್ಪರಗಿ ಮತಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ಸುಮಾರು 250 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಗೊಳಿಸಲಾಗಿದೆ. ಕ್ಷೇತ್ರದ ತಲಾ ಒಂದು ಗ್ರಾಮಕ್ಕೆ ಕನಿಷ್ಠ 50 ಲಕ್ಷ ರೂ. ಅನುದಾನವನ್ನು ಕಾಮಗಾರಿಗಳಿಗೆ ಹಂಚಲಾಗುವುದು. ಗುಂಡಕನಾಳ ಗ್ರಾಮದಿಂದ ನೀರಿನ ಪೈಪ್‌ಲೈನ್ ಮೂಲಕ ಕೊಡಗಾನೂರ ಗ್ರಾಮಕ್ಕೆ ನೀರು, ತಾಳಿಕೋಟೆ ಹಳ್ಳಕ್ಕೆ 21 ಕೋಟಿ ರೂ. ಬಾಂದಾರ ನಿರ್ಮಾಣಕ್ಕೆ ಹಣ ಮೀಸಲು ಒಳಗೊಂಡು ಎಲ್ಲ ಅಭಿವೃದ್ಧಿ ಪರ ಕಾರ್ಯಗಳಿಗೆ ಕ್ಷೇತ್ರದ ಜನರ ಸಹಕಾರದ ಅಗತ್ಯವಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ) ಮಾತನಾಡಿದರು. ಸಾಹೇಬಗೌಡ ಪಾಟೀಲ (ಸಾಸನೂರು), ತಾಪಂ ಸದಸ್ಯ ಸೋಮನಗೌಡ ಹಾದಿಮನಿ, ತಾಪಂ ಸದಸ್ಯ ರಾಜುಗೌಡ ಬಿರಾದಾರ, ಜಿಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಪ್ರಶಾಂತ ಹಾವರಗಿ, ಮಲ್ಲನಗೌಡ ಪೊಲೀಸ್‌ಪಾಟೀಲ ದೇವರಹಿಪ್ಪರಗಿ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಶಿದರಡ್ಡಿ, ನಿಂಗನಗೌಡ ಬಿರಾದಾರ, ಬಸನಗೌಡ ಪಾಟೀಲ (ಲಕ್ಕುಂಡಿ), ಸಂಗನಗೌಡ ಹೆಗರಡ್ಡಿ, ನಿಂಗಪ್ಪ ಹೊಸಮನಿ, ಹನುಮಂತ್ರಾಯ ಢವಳಗಿ, ಭೀಮನಗೌಡ ವಣಕ್ಯಾಳ, ಭೀಮನಗೌಡ ಪಾಟೀಲ, ಕೊಡಗಾನೂರ ಪಿಡಿಒ ಪಿ.ಆರ್. ಜೇವೂರ, ಎಇಇ.ತಿಮ್ಮರಾಜಪ್ಪ, ಸಹಾಯಕ ಅಭಿಯಂತರ ಶಿವಾನಂದ ಮಡಿವಾಳರ, ಅವಿನಾಶ ಆಲ್ಯಾಳ, ಅಲೋಕ ಗೌಡಗೇರಿ ಇದ್ದರು.