ಅಲೀಗಢ : ಅಲೀಗಢದ ಟಪ್ಪಲ್ ನಲ್ಲಿ ನಡೆದಿದ್ದ ಎರಡೂವರೆ ವರ್ಷದ ಬಾಲಕಿಯ ಕೊಲೆ ಕೇಸಿಗೆ ಸಂಬಂಧಿಸಿ ಆರು ಸದಸ್ಯ ವಿಶೇಷ ತನಿಖಾ ತಂಡವನ್ನು (SIT) ರೂಪಿಸಲಾಗಿದೆ. ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕಳೆದ ಮೇ 31ರಂದು ಟಪ್ಪಲ್ ಟೌನ್‌ಶಿಪ್ ನಿಂದ ನಾಪತ್ತೆಯಾಗಿದ್ದ ಬಾಲಕಿಯ ಛಿದ್ರಗೊಂಡ ಶವ ಜೂನ್ 2ರಂದು ಕಸದ ರಾಶಿಯಲ್ಲಿ ಪತ್ತೆಯಾಗಿತ್ತು.
ಬಾಲಕಿಯ ಕೊಲೆಗೆ ಸಂಬಂಧಿಸಿ ಈ ತನಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 10,000 ರೂ. ಹಣದ ವಿವಾದದಲ್ಲಿ ತಮ್ಮ ಮಗುವಿನ ಹತ್ಯೆ ನಡೆದಿದೆ ಎಂದು ಬಾಲಕಿಯ ಮನೆಯವರು ಪೊಲೀಸರಿಗೆ ಹೇಳಿದ್ದಾರೆ.
ಪೋಸ್ಟ್ ಮಾರ್ಟೆಮ್ ವರದಿಯ ಪ್ರಕಾರ ಬಾಲಕಿಯನ್ನು ಅಮಾನುಷವಾಗಿ ಎದೆಯ ಭಾಗಕ್ಕೆ ಹೊಡೆದು ಸಾಯಿಸಲಾಗಿದೆ. ಅದರ ಎಲ್ಲ ಪಕ್ಕೆಲುಬುಗಳು ಮುರಿದು ಹೋಗಿವೆ. ಎಡ ಕಾಲು ಮತ್ತು ತಲೆಗೆ ಗಂಭೀರವಾದ ಗಾಯಗಳಾಗಿವೆ. ಬಾಲಕಿಯ ಬಲಗೈಯನ್ನು ಹೆಗಲಿನಿಂದಲೇ ಕತ್ತರಿಸಲಾಗಿದೆ. ಶವವನ್ನು ಕಸದ ರಾಶಿಯಲ್ಲಿ ಎಸೆಯಲಾದ ಕಾರಣ ಅದರ ದೇಹದ ಭಾಗಗಳನ್ನು ಕ್ರಿಮಿ ಕೀಟಗಳು ತಿಂದಿವೆ.
ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆಯೇ ಎಂಬುದನ್ನು ಇದೀಗ ಫೊರೆನ್ಸಿಕ್ ಲ್ಯಾಬ್ ನವರು ಪರೀಕ್ಷಿಸುತ್ತಿದ್ದಾರೆ.