Advertisement

ಐಪಿಎಲ್‌: ವಾರ್ನರ್‌ ಬದಲು ಅಲೆಕ್ಸ್‌ ಹೇಲ್ಸ್‌

06:45 AM Apr 01, 2018 | Team Udayavani |

ಹೊಸದಿಲ್ಲಿ: ಇಂಗ್ಲೆಂಡಿನ ಸ್ಫೋಟಕ ಆರಂಭಕಾರ, ಏಕದಿನ ಹಾಗೂ ಟಿ20 ಸ್ಪೆಷಲಿಸ್ಟ್‌ ಖ್ಯಾತಿಯ ಅಲೆಕ್ಸ್‌ ಹೇಲ್ಸ್‌ ಅವರನ್ನು ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ನಿಷೇಧಕ್ಕೊಳಗಾದ ಡೇವಿಡ್‌ ವಾರ್ನರ್‌ ಸ್ಥಾನಕ್ಕೆ ಹೇಲ್ಸ್‌ ಆಯ್ಕೆಯಾಗಿದ್ದಾರೆ.

Advertisement

ಒಂದು ಕೋಟಿ ಮೂಲಬೆಲೆ ಹೊಂದಿದ್ದ ಅಲೆಕ್ಸ್‌ ಹೇಲ್ಸ್‌ ಅವರನ್ನು ಕಳೆದ ಐಪಿಎಲ್‌ ಹರಾಜಿನ ವೇಳೆ ಯಾವ ತಂಡವೂ ಖರೀದಿಸಿರಲಿಲ್ಲ. ಇಂಗ್ಲೆಂಡಿನ ಇತರ ಆಟಗಾರರಾದ ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಕ್ರಿಸ್‌ ವೋಕ್ಸ್‌, ಸ್ಯಾಮ್‌ ಬಿಲ್ಲಿಂಗ್ಸ್‌ ಮೇಲೆ ತೋರಿದ ಆಸಕ್ತಿಯನ್ನು ಹೇಲ್ಸ್‌ ಮೇಲೆ ಯಾರೂ ತೋರಿರಲಿಲ್ಲ. ಈಗ “ರ್ಯಾಪ್‌’ ಯಾದಿಯಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಶನಿವಾರ ಪ್ರಕಟಿಸಿದೆ.

ಸನ್‌ರೈಸರ್ ಹೈದರಾಬಾದ್‌ ತಂಡದ ನಾಯಕನ ಸ್ಥಾನಕ್ಕೆ ಈಗಾಗಲೇ ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌ ಅವರನ್ನು ಆರಿಸಲಾಗಿದೆ. ಭುವನೇಶ್ವರ್‌ ಕುಮಾರ್‌ ಉಪನಾಯಕರಾಗಿದ್ದಾರೆ.

2016ರಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸಿದ ಡೇವಿಡ್‌ ವಾರ್ನರ್‌ ಸ್ಥಾನವನ್ನು ತುಂಬುವುದು ಹೈದರಾಬಾದ್‌ ಫ್ರಾಂಚೈಸಿ ಪಾಲಿಗೆ ಸವಾಲಿನ ಕೆಲಸವಾಗಿತ್ತು. 52.63ರ ಸರಾಸರಿ ಹಾಗೂ 147.70ರ ಸ್ಟ್ರೈಕ್‌ರೇಟ್‌ನಲ್ಲಿ, 59 ಇನ್ನಿಂಗ್ಸ್‌ಗಳಿಂದ 2,579 ರನ್‌ ಪೇರಿಸಿದ ಸಾಧನೆ ವಾರ್ನರ್‌ ಅವರದಾಗಿತ್ತು. ಅಷ್ಟೇ ಅಲ್ಲ, ಈ ವರ್ಷ ಅವರನ್ನು ಫ್ರಾಂಚೈಸಿಯಲ್ಲೇ ಉಳಿಸಿಕೊಳ್ಳಲಾಗಿತ್ತು.

ಎರಡನೇ ಐಪಿಎಲ್‌
ಅಲೆಕ್ಸ್‌ ಹೇಲ್ಸ್‌ ಪಾಲಿಗೆ ಇದು 2ನೇ ಐಪಿಎಲ್‌. ಇದಕ್ಕೂ ಮುನ್ನ ಅವರು 2015ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಅಂದು ಕೂಡ ಬದಲಿ ಆಟಗಾರನಾಗಿಯೇ ಅವಕಾಶ ಪಡೆದಿದ್ದರು. ಗಾಯಾಳು ಕೋರಿ ಆ್ಯಂಡರ್ಸನ್‌ ಜಾಗಕ್ಕೆ ಹೇಲ್ಸ್‌ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ಹಾಗೂ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಅಲೆಕ್ಸ್‌ ಹೇಲ್ಸ್‌ ಪಾಲಿಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next