ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗಿನಲ್ಲಿದ್ದ ಚಿನ್ನ ಹಾಗೂ ನಗದು ಕಳವು ಮಾಡಿದ್ದ ಆರೋಪಿಗಳು ಮತ್ತೆ ಅದೇ ಬಸ್ಸಿನಲ್ಲಿ ನಾಲ್ಕು ತಿಂಗಳ ಬಳಿಕ ಬಂದಾಗ ನಿರ್ವಾಹಕ ಅವರ ಗುರುತು ಪತ್ತೆ ಮಾಡಿ ನಿಗಮದ ಅಧಿಕಾರಿಗಳ ಮೂಲಕ ಪೊಲೀಸರಿಗೆ ಒಪ್ಪಿಸಿದ ಘಟನೆ ನ. 12ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಕರಣದ ವಿವರ
ಜು. 10ರಂದು ಮಂಗಳೂರು 2ನೇ ಘಟಕದ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿರುವಾಗ ಉಪ್ಪಿನಂಗಡಿಯ ಗಡಿಯಾರದ ಬಳಿ ಬಸ್ ನಿಲ್ಲಿಸಿದಾಗ ಇಬ್ಬರು ಇಳಿದು ಹೋಗಿದ್ದರು. ಸುಮಾರು ನಿಮಿಷಗಳ ಕಾಲ ಅವರಿಗಾಗಿ ಕಾದರೂ ಅವರ ಪತ್ತೆಯಾಗಿರಲಿಲ್ಲ. ಘಟಕದ ಸೂಚನೆಯಂತೆ ಅನಂತರ ಬಸ್ ಮುಂದಕ್ಕೆ ಬಿಡಲಾಗಿತ್ತು.
ಹಣ ಮತ್ತು ಒಡವೆ ಕಳವಾಗಿದ್ದ ಬಗ್ಗೆ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.
ನ. 12ರಂದು ರಾತ್ರಿ 9.45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ತೆರಳಲು ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಹತ್ತಿದ್ದರು. ನಿರ್ವಾಹಕ ಅಶೋಕ್ ಜಾದವ್ ಅವರು ಟ್ರಿಪ್ ಶೀಟ್ ಪರಿಶೀಲಿಸುತ್ತಿರುವಾಗ ಇಬ್ಬರು ಮೊದಲೇ ಬಂದು ಕುಳಿತಿದ್ದರು.
Related Articles
ಅನುಮಾನಗೊಂಡ ನಿರ್ವಾಹಕ, ಈ ಹಿಂದೆ ಅವರು ಬಂದಿದ್ದಾಗ ಕಳವಾದ ಬಗ್ಗೆ ನೆನಪು ಮಾಡಿಕೊಂಡರು. ಕೂಡಲೇ ಘಟಕಕ್ಕೆ ಮಾಹಿತಿ ನೀಡಿದ್ದರು. ಘಟಕದ ಸೂಚನೆಯಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಆ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಕಳವು ನಡೆಸಿರುವ ಮಾಹಿತಿ ನೀಡಿದ್ದಾರೆ.
ಸಮಯಪ್ರಜ್ಞೆ ಮೆರೆದ ಬಸ್ ನಿರ್ವಾಹಕ ಅಶೋಕ್ ಜಾದವ್ ಅವರ ಕಾರ್ಯ ತತ್ಪರತೆಯನ್ನು ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಶ್ಲಾಘಿಸಿದ್ದಾರೆ.