Advertisement

‘ಅಲೆಗಳಿಲ್ಲದ ಸಾಗರ…’ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ

01:21 PM Nov 03, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಅಲೆಗಳಿಲ್ಲದ ಸಾಗರ’ ಚಿತ್ರದ ಮುಹೂರ್ತ ಇತ್ತೀಚೆಗೆ ನೆರೆವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್‌ ಸೇರಿದಂತೆ ಚಿತ್ರರಂಗದ ಅನೇಕರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, “ಅಲೆಗಳಿಲ್ಲದ ಸಾಗರ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

Advertisement

“ಸಾಗರ್‌ ಸಿನಿ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ಕರುಣಾಕರ್‌ ರಾವಣ್‌ ಮತ್ತು ನಿರಂಜನ ಮೂರ್ತಿ ಟಿ. ಎಸ್‌ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ನವ ಪ್ರತಿಭೆ ಸಾಗರ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ನವ ನಟ ಮೋಹನ್‌ “ಅಲೆಗಳಿಲ್ಲದ ಸಾಗರ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಸಿನಿಮಾದಲ್ಲಿ ಮೋಹನ್‌ ಕಂಪೆನಿಯೊಂದರ ಎಂ. ಡಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಶಾನ್ವಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸಾಗರ್‌, ಅಶ್ವಿ‌ನಿ ಶೆಟ್ಟಿ, ರಂಗ ಯಾದವ್‌ ಮಂಡ್ಯ ಮತ್ತಿತರರು “ಅಲೆಗಳಿಲ್ಲದ ಸಾಗರ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

“ಗಂಡ-ಹೆಂಡತಿ ನಡುವಿನ ಬಾಂಧವ್ಯ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಇವೆಲ್ಲವನ್ನೂ ಸಸ್ಪೆನ್ಸ್‌ – ಥ್ರಿಲ್ಲರ್‌ ಶೈಲಿಯಲ್ಲಿ ತೆರೆಗೆ ತರಲಾಗುತ್ತಿದೆ. ಐದು ಪ್ರಮುಖ ಪಾತ್ರಗಳ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ’ ಎಂಬುದು ಚಿತ್ರತಂಡದ ಮಾತು.

ಸಿನಿಮಾದ ನಾಲ್ಕು ಹಾಡುಗಳಿಗೆ ಸಂಜೀವ್‌ ರಾವ್‌ ಸಾಹಿತ್ಯ-ಸಂಗೀತ ಒದಗಿಸುತ್ತಿದ್ದಾರೆ. ಸಿನಿಮಾಕ್ಕೆ ರಾಘು ಎ. ರೂಗಿ ಛಾಯಾಗ್ರಹಣ, ನವೀನ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸ್ಟಾರ್‌ ನಾಗಿ ನೃತ್ಯ ಸಂಯೋಜನೆ ಮತ್ತು ಅಶೋಕ್‌ ಸಾಹಸ ಸಂಯೋಜನೆಯಿದೆ.

Advertisement

ಮೊದಲ ಹಂತದಲ್ಲಿ ನೆಲಮಂಗಲ ಸುತ್ತಮುತ್ತ “ಅಲೆಗಳಿಲ್ಲದ ಸಾಗರ’ ಚಿತ್ರದ ಚಿತ್ರೀಕರಣ ನಡೆಸಲಿರುವ ಚಿತ್ರತಂಡ, ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ “ಅಲೆಗಳಿಲ್ಲದ ಸಾಗರ’ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಸದ್ಯ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ “ಅಲೆಗಳಿಲ್ಲದ ಸಾಗರ’ ಚಿತ್ರ, ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ

Advertisement

Udayavani is now on Telegram. Click here to join our channel and stay updated with the latest news.

Next