ಕರ್ನಾಟಕಕ್ಕೆ ನೆರೆ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ, ನಿರ್ಲಕ್ಷ್ಯ ಮಾಡುತ್ತಿದೆ, ರಾಜ್ಯ ಸರ್ಕಾರ ನಷ್ಟದ ಅಂದಾಜು ಕುರಿತು ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸಿದೆ ಎಂಬ ವಿಷಯಗಳು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕ ಎಂಬ ಮಾತು ರಾಜ್ಯದ ಮಟ್ಟಿಗೆ ಸುಳ್ಳಾಗಿದೆ ಎಂಬ ಭಾವನೆ ರಾಜ್ಯದ ಜನತೆಯಲ್ಲಿ ಮೂಡಿ ಅದು ಆಕ್ರೋಶಕ್ಕೆ ತಿರುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ಬಿಡುಗಡೆ ಮಾಡಿದೆ.
ಇದು ಒಂದು ರೀತಿಯಲ್ಲಿ ಸಮಾಧಾನಕರ. ಆದರೂ ರಾಜ್ಯ ಸರ್ಕಾರವು 3800 ಕೋಟಿ ರೂ. ಗೆ ಬೇಡಿಕೆ ಇಟ್ಟಿತ್ತು. ಇದು ಮಧ್ಯಂತರ ಪರಿಹಾರ ಎಂದು ಹೇಳಿರುವುದರಿಂದ ಮುಂದೆ ಮತ್ತಷ್ಟು ಪರಿಹಾರ ಬರುವ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ.
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ರಾಜ್ಯದ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಕೊಟ್ಟು ಬಂದು ಜತೆಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ಮಾಡಿ ಕೇಂದ್ರ ತಂಡದ ಅಧ್ಯಯನ ಮುಗಿದರೂ ಪರಿಹಾರ ಘೋಷಣೆಯಾಗದ ಬಗ್ಗೆ ಪ್ರವಾಹ ಸಂತ್ರಸ್ತರಷ್ಟೇ ಅಲ್ಲದೆ ಜನರ ಆಕ್ರೋಶಕ್ಕೂ ಕಾರಣವಾಗಿತ್ತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು “ಒಂದು ರೀತಿಯಲ್ಲಿ ನಾನು ತಂತಿಯ ಮೇಲೆ ನಡೆಯುತ್ತಿದ್ದೇನೆ’ ಎಂದು ಹೇಳುವ ಮೂಲಕ ಅಸಹಾಯಕತೆ ಹೊರಹಾಕಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂದೂ ಹೇಳಿದ್ದರು.
ಇದರ ನಡುವೆ ಬಿಜೆಪಿ ಸಂಸದ ಹಿರಿಯ ಮುಖಂಡ ಶ್ರೀನಿವಾಸಪ್ರಸಾದ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಕೇಂದ್ರ ಸರ್ಕಾರದ ಧೋರಣೆ ಹಾಗೂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಲ್ಲಿ ಆಗುತ್ತಿರುವ ಲೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಹೈಕಮಾಂಡ್ ಮಾಹಿತಿ ಪಡೆದಿತ್ತು.
ರಾಜ್ಯದ ಜನತೆಯ ಆಕ್ರೋಶ ಬೇರೆ ಸ್ವರೂಪ ಪಡೆದು ಅದು ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗುವುದು ಬೇಡ ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು 1200 ಕೋಟಿ ರೂ. ಪರಿಹಾರ ಘೋಷಿಸಿದೆ.
ಏನೇ ನಿಯಮಾವಳಿ ಇದ್ದರೂ ಮಾನವೀಯತೆ ದೊಡ್ಡದು. ಒಕ್ಕೂಟ ವ್ಯವಸ್ಥೆಯಲ್ಲಿ ಬರ ಹಾಗೂ ಪ್ರವಾಹ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ನೆರವಿಗೆ ಧಾವಿಸುವುದು ಅತ್ಯಗತ್ಯ.
ಪ್ರತಿಪಕ್ಷಗಳು ಸಹ ಈ ವಿಚಾರದಲ್ಲಿ ಹೆಚ್ಚು ರಾಜಕೀಯ ಮಾಡಲು ಹೋಗದೆ ರಾಜ್ಯಕ್ಕೆ ಪರಿಹಾರ ಬಿಡುಗಡೆಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಎಲ್ಲ ರೀತಿಯ ಸಹಕಾರ ನೀಡಿ ಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಿ ಮತ್ತಷ್ಟು ನೆರವಿಗಾಗಿ ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟು ಕಷ್ಟಕ್ಕೊಳಗಾಗಿರುವ ಜನರ ಜೀವನ ಸುಧಾರಣೆಗೆ ಹೆಚ್ಚು ಗಮನಹರಿಸಬೇಕಾಗಿದೆ.