Advertisement

ಪುಂಡರಿಗೆ ಖಾಲಿ ನಿವೇಶನ-ರಸ್ತೆಗಳೇ ಬಾರ್‌!

01:10 PM Jun 13, 2022 | Team Udayavani |

ಜೇವರ್ಗಿ: ಪಟ್ಟಣದ ಹೊರ ವಲಯದಲ್ಲಿರುವ ಖಾಲಿ ನಿವೇಶನಗಳು ಇಳಿ ಹೊತ್ತಿನಲ್ಲಿ ಪುಂಡರು ಮದ್ಯಪಾನ ಮಾಡುತ್ತಾ ಹರಟುವ ಸ್ಥಳಗಳಾಗಿವೆ.

Advertisement

ಪಟ್ಟಣದ ಚನ್ನೂರ ರಸ್ತೆಯಲ್ಲಿ ಬರುವ ಲೇಔಟ್‌, ವಿಜಯಪುರ ಬೈಪಾಸ್‌ ರಸ್ತೆ, ಫುಡ್‌ಪಾರ್ಕ್‌, ತಾಲೂಕು ಕ್ರೀಡಾಂಗಣ, ದೇವರಮನಿ ಲೇಔಟ್‌, ರದ್ದೇವಾಡಗಿ ಲೇಔಟ್‌ ಸೇರಿದಂತೆ ಹಲವಾರು ಖಾಲಿ ನಿವೇಶನಗಳು ಸಂಜೆ ಹೊತ್ತಲ್ಲಿ ಕುಡುಕರ ಅಡ್ಡೆಗಳಾಗಿ ಪರಿವರ್ತನೆಯಾಗಿವೆ.

ಪಟ್ಟಣದಲ್ಲಿ ಇರುವ ಮದ್ಯದ ಅಂಗಡಿಗಳ ಪೈಕಿ ಒಂಭತ್ತು ಪರವಾನಗಿ ಹೊಂದಿರುವ ಸಿಎಲ್‌ 4, ಏಳು ಪರವಾನಗಿ ಪಡೆದಿರುವ ಎರಡು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಿವೆ. ಕದ್ದುಮುಚ್ಚಿ ಮದ್ಯಪಾನ ಮಾಡುವವರು, ಕೆಲ ಪುಂಡರು ಅಕ್ಕಪಕ್ಕದ ಸಾರ್ವಜನಿಕ ಸ್ಥಳದ ಸಂದುಗೊಂದಿಗಳನ್ನು ಹುಡುಕುತ್ತಾರೆ. ಜನಸಂಚಾರ ಕಡಿಮೆ ಇರುವ ಅಥವಾ ಸಂದಿಗೊಂದಿಗಳಲ್ಲಿ ಕುಳಿತು ಮದ್ಯಪಾನ ಮಾಡುತ್ತಾರೆ. ಕೆಲವೊಮ್ಮೆ ರಸ್ತೆ ಪಕ್ಕದಲ್ಲೇ ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಕೆಲವರು ಪಟ್ಟಣದ ಹೊರ ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ- ಕಲಬುರಗಿ ಬೈಪಾಸ್‌ಗೆ ತೆರಳಿ ಮದ್ಯಪಾನ ಮಾಡುತ್ತಿದ್ದಾರೆ. ಬೈಪಾಸ್‌ ರಸ್ತೆಯುದ್ದಕ್ಕೂ ಎಲ್ಲಿ ನೋಡಿದರಲ್ಲಿ ಮದ್ಯದ ಬಾಟಲ್‌ಗ‌ಳೇ ಕಾಣ ಸಿಗುತ್ತವೆ. ಸಂಜೆಯಾಗುವುದೇ ತಡ ಬೈಕ್‌-ಕಾರುಗಳಲ್ಲಿ ಮದ್ಯದ ಬಾಟಲ್‌ಗ‌ಳೊಂದಿಗೆ ತೆರಳಿ ಕುಡಿದು ರಸ್ತೆ ಮೇಲೆ ಬಾಟಲ್‌ ಒಡೆದು ಹಾಕಲಾಗುತ್ತಿದೆ. ಇದರಿಂದ ನಸುಕಿನ ಜಾವ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವವರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಹಿಳೆಯರು ಸಂಜೆ ಸಮಯದಲ್ಲಿ ಅಡ್ಡಾಡಲು ಹಿಂಜರಿಯುತ್ತಿದ್ದಾರೆ. ರಸ್ತೆ ಪಕ್ಕ ಮತ್ತು ಜಮೀನುಗಳ ಅಂಚಿನಲ್ಲಿ ಮದ್ಯದ ಬಾಟಲ್‌ಗ‌ಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ.

ಪಟ್ಟಣದ ಕೆಲವು ಮಾಂಸಾಹಾರಿ, ಹೋಟೆಲ್‌, ಡಾಬಾಗಳಲ್ಲಿ ಕದ್ದುಮುಚ್ಚಿ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಕಡಿವಾಣ ಹಾಕಬೇಕು. ಅಬಕಾರಿ-ಪೊಲೀಸ್‌ ಇಲಾಖೆ ಅಧಿಕಾರಿಗಳು ಗಸ್ತು ತಿರುಗಿ, ಈ ಕುರಿತು ನಿಗಾ ಇಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

Advertisement

ವಾಯುವಿಹಾರಕ್ಕೆ ಜೇವರ್ಗಿ ಪಟ್ಟಣದಲ್ಲಿ ಉದ್ಯಾನವನಗಳು ಇಲ್ಲದ ಕಾರಣ, ಜನತೆ ಫುಡ್‌ಪಾರ್ಕ್‌ ಅಥವಾ ಖಾಲಿ ನಿವೇಶನಗಳ ಕಡೆ ತೆರಳುತ್ತಾರೆ. ಆದರೆ ಅಲ್ಲಿ ಇತ್ತೀಚೆಗೆ ಕೆಲವು ಪುಂಡರ ಹಾವಳಿ ಮಿತಿಮೀರಿದೆ. ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲ್‌ಗ‌ಳನ್ನು ಒಡೆದು ಹಾಕುತ್ತಿದ್ದಾರೆ. ಇದರಿಂದ ಮಹಿಳೆಯರು ಸಂಜೆ ಅಡ್ಡಾಡಲು ಹಿಂಜರಿಯುತ್ತಿದ್ದಾರೆ. ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. -ಅಕ್ಬರ್‌ಸಾಬ್‌ ಮುಲ್ಲಾ, ಸ್ಥಳೀಯ.

ಫುಡ್‌ಪಾರ್ಕ್‌ ಹಾಗೂ ಕೆಲ ಖಾಲಿ ನಿವೇಶನಗಳಲ್ಲಿ ಸಂಜೆ ಹೊತ್ತಲ್ಲಿ ಪುಂಡರ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. -ಸಂಗಮೇಶ ಅಂಗಡಿ, ಪಿಎಸ್‌ಐ, ಜೇವರ್ಗಿ

-ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next