ಆಳಂದ: ಪಟ್ಟಣದಲ್ಲಿ 144ನೇ ಕಲಂ ನಿಷೇಧಾಜ್ಞೆ ನಡುವೆ ಮಂಗಳವಾರ ಲಾಡ್ಲೆ ಮಶಾಕ್ ದರ್ಗಾದಲ್ಲಿ ಸಂದಲ್ ಮತ್ತು ರಾಘವಚೈತನ್ಯ ಲಿಂಗಕ್ಕೆ ಪೂಜೆ ಹಾಗೂ ಶುದ್ಧೀಕರಣ ಕೈಗೊಳ್ಳುವ ವಿಷಯಕ್ಕೆ ಉಲ್ಬಣಿಸಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಸ್ಲಿಂ ಗುಂಪಿನ ಮೇಲೆ ಪ್ರತ್ಯೇಕವಾಗಿ ನಾಲ್ಕು ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿ ಸಂಜೆವರೆಗೆ 167 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರವೇ ಆರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆನಂತರ ಮತ್ತೆ ಮೂರು ಪ್ರಕರಣ ದಾಖ ಲಿಸಿಕೊಂಡ ಹಿನ್ನೆಲೆಯಲ್ಲಿ ಪುಂಡಾಟಿಕೆಯಲ್ಲಿ ತೊಡಗಿದ್ದರು ಎನ್ನಲಾದ ಹಲವರ ಮನೆಗೆ ನುಗ್ಗಿ ಬುಧವಾರ ಬೆಳಗ್ಗೆಯೇ ಪೊಲೀಸರು ಇನ್ನಿತರರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ ದ್ದಾರೆ.
ನಿಷೇಧಾಜ್ಞೆ ಉಲ್ಲಂಘನೆ, ಅಕ್ರಮ ಗುಂಪು ಕಟ್ಟಿಕೊಂಡಿದ್ದ ಪ್ರಕರಣ, ಕಲ್ಲು ತೂರಾಟ, ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿ ಕರ್ತವ್ಯಕ್ಕೆ ಅಡ್ಡಿ, ಮಾರಕಾಸ್ತ್ರ ಬಳಸಿ ಕರ್ತವ್ಯಕ್ಕೆ ನಿಯೋ ಜಿತವಾದ ಸರ್ಕಾರಿ ಸಿಬ್ಬಂದಿ ಹಾಗೂ ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸಿದ, ವಾಹನಗಳಿಗೆ ಕಲ್ಲು ತೂರಾಟ ನಡೆಸಿದ ಆರೋಪದಡಿ ಬಂಧನ ಕಾರ್ಯ ಮುಂದುವರಿದಿದೆ.
ಇನ್ನೊಂದೆಡೆ ನಿಷೇಧಾಜ್ಞೆ ನಡುವೆ ರಾಘವಚೈತನ್ಯ ಲಿಂಗದ ಪೂಜೆಗೆ ಹೊರಟಿದ್ದ ಗುಂಪಿನವರ ಮೇಲೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಕುರಿತು ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದ್ದು, ಗುರುವಾರ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿದ್ದು 167 ಜನರನ್ನು ಬಂಧಿಸಲಾಗಿದೆ. ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ನಾಗರಿಕರು ಶಾಂತಿ-ಸೌಹಾರ್ದತೆ ಕಾಪಾಡಬೇಕು.
-ಯಲ್ಲಪ್ಪಾ ಸುಬೇದಾರ, ತಹಶೀಲ್ದಾರ್