ಆಳಂದ: ಇದುವರೆಗೂ ಕೇವಲ ಕ್ವಾರಂಟೈನ್‌ಗೆ ಅಥವಾ ಮಹಾರಾಷ್ಟ್ರದಿಂದ ಪ್ರವಾಸಕ್ಕೆ ಒಳಗಾದವರಲ್ಲಿ ಪತ್ತೆಯಾಗುತ್ತಿದ್ದ ಕೋವಿಡ್ ಸೋಂಕು ಈಗ ಇದ್ಯಾವೂದು ಇಲ್ಲದೆ ಇರುವ ಪಟ್ಟಣದಲ್ಲೇ ವಾಸವಾಗಿದ್ದ ಓರ್ವ ಮಹಿಳೆ, ನಿವೃತ್ತ ಶಿಕ್ಷಕ ಸೇರಿ ಮೂವರಲ್ಲಿ ಸೋಂಕು ದೃಢಪಟ್ಟಿರುವುದು ಗ್ರಾಮೀಣ ಸೇರಿ ಪಟ್ಟಣದ ನಾಗರಿಕರನ್ನು ಬೆಚ್ಚಿಬೀಳಿಸಿದೆ.
ಪಟ್ಟಣದ ದರ್ಗಾ ರಸ್ತೆಯ ಮಹಾದೇವ ಮಂದಿರ ಹತ್ತಿರದ ನಿವೃತ್ತ ಶಿಕ್ಷಕರು (63), ಬ್ರಾಹ್ಮಣಗಲ್ಲಿಯ ಓರ್ವ ಮಹಿಳೆ (56), ಹಾಗೂ ಓರ್ವ ವ್ಯಕ್ತಿಯು (44) ಸೋಂಕು ತಗಲಿದ್ದು ದೃಢಪಟ್ಟಿದೆ. ಮೂವರು ಸೋಂಕಿತರು ಸೇರಿ 6 ಮಂದಿ ಸ್ವಯಂ ಪ್ರೇರಿತವಾಗಿ ಕಲಬುರಗಿಯಲ್ಲಿ ಗಂಟಲು ದ್ರವ ತಪಾಸಣೆಗೊಳಗಾಗಿದ್ದು, ಈ ವೇಳೆ ತಪಾಸಣೆ ವರದಿಯಲ್ಲಿ ಮೂವರಿಗೆ ಸೋಂಕು ದೃಢಪಟ್ಟು, ಇನ್ನೂಳಿದ ಮೂವರ ವರದಿ ನಕಾರಾತ್ಮಕವಾಗಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಸಕಾರಾತ್ಮಕ ಸೋಂಕು ಮೂವರಿಗೆ ಹೇಗೆ ಎಲ್ಲಿಂದ ಹರಡಿತು ಎಂಬುದು ವರದಿ ನೀಡಲು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪಟ್ಟಣ ಸೇರಿ ಗ್ರಾಮೀಣ ಭಾಗದ ಕ್ವಾರಂಟೈನ್‌ಗಳ ಹಾಗೂ ಪರಸ್ಪರ ಸೋಂಕಿತರಿಂದ ನೇರ ಸಂಪರ್ಕಕ್ಕೆ ಬಂದವರ ಮಾದರಿ ದ್ರವದ ಅಂತಿಮ ವರದಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದುವರೆಗೂ 114ಕ್ಕೆ ಸೋಂಕಿತರ ಸಂಖ್ಯೆ ದಾಖಲಾಗಿದೆ. ಈ ಪೈಕಿ 27 ಮಂದಿಗೆ ಬಿಡುಗಡೆಯಾಗಿದೆ.
ಇನ್ನುಳಿದವರಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ವಲಸೆ ಬಂದವರಿಗೆ ಅಥವಾ ಶಂಕಿತರಿಗೆ 7 ದಿನಗಳವರೆಗೆ ಕ್ವಾರಂಟೈನ್‌ಲ್ಲಿ ಕಡ್ಡಾಯವಾಗಿ ಇರಬೇಕು. ಬಳಿಕ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಅನುಸರಿಸಬೇಕು. ಇಂಥ ಹೊತ್ತಿನಲ್ಲಿ ನಿಯಮ ಉಲ್ಲಂಘಿಸಿ ಹೊರಗಡೆ ಬಂದರೆ ಮತ್ತೆ 14 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಲಾಗುವುದು ಅಥವಾ ಅಗತ್ಯ ಬಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗುವುದು ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಮೂವರು ಕೋವಿಡ್-19 ಸೋಂಕಿರತ ಹೊಸ ಪ್ರಕರಣ ಪತ್ತೆಯಾದ ಬಡಾವಣೆಗಳಿಗೆ ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸೂಚಿಸಿ ಮಾತನಾಡಿದರು. ಹೋಂ ಕ್ವಾರಂಟೈನ್ ಅಥವಾ ಕ್ವಾರಂಟೈನ್‌ನಿಂದ ಹೊರಗಡೆ ತಿರುಗುವ ವ್ಯಕ್ತಿಗಳ ಮಾಹಿತಿಯನ್ನು ನೆರೆಹೊರೆಯವರು ಆರೋಗ್ಯ, ಪೊಲೀಸ್, ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರು ಗೌಪ್ಯತೆಯಿಂದ ಇರಿಸಲಾಗುವುದು ಎಂದರು.