Advertisement

ಪಕ್ಷಾತೀತ ಹೋರಾಟಕ್ಕೆ ಸಿಗುತ್ತಾ ಜಯ?

01:31 PM Sep 11, 2017 | |

ಆಲಮೇಲ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ತಾಲೂಕಾಗುವ ಎಲ್ಲ ಅರ್ಹತೆ ಹೊಂದಿದ್ದರೂ ಜನ ಪ್ರತಿನಿಧಿಗಳು, ಸರ್ಕಾರ ಮತ್ತು ಅಧಿಕಾರಿಗಳ ನಿಷ್ಕಾಳಜಿಯಿಂದ ತಾಲೂಕು ಕೇಂದ್ರವಾಗಿಲ್ಲ. ಇದಕ್ಕಾಗಿ ಈಗ ಪುನಃ ಪಕ್ಷಾತೀತ ಹೋರಾಟ ಪ್ರಾರಂಭವಾಗಿದ್ದು ಯಸಸ್ವಿಯಾಗುತ್ತದಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

Advertisement

2003ರಲ್ಲಿ 45 ದಿನ ಸರದಿ ಸತ್ಯಾಗ್ರಹ ಮಾಡಿ ಕೊನೆಗೆ 4 ದಿನ ಆಮರಣ ಉಪವಾಸ ಮಾಡಿದರೂ ಯಾವೊಬ್ಬ ಜನಪ್ರತಿನಿಧಿ ಸ್ಪಂದನೆ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನ ಆಗ ಬಸ್‌ಗೆ ಬೆಂಕಿ ಹಂಚಿ ಪ್ರತಿಭಟಿಸಿದ್ದರು. ಈಗ ಮತ್ತೆ ಪ್ರತಿಭಟನೆ ಪ್ರಾರಂಭವಾಗಿದ್ದು ಯಾವ ಸ್ವರೂಪ ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

ಸರ್ಕಾರ ತಾಲೂಕು ಕೇಂದ್ರ ಮಾಡಲು ಸೂಕ್ತವಾಗಿ ಪರಿಶೀಲಿಸಿ ಆದ್ಯತೆ ನೀಡಿದ್ದರೆ ಜಿಲ್ಲೆಯಲ್ಲಿ ಆಲಮೇಲಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುತ್ತದೆ. ಸರ್ಕಾರ ಯಾವುದನ್ನು ಪರಿಶೀಲಿಸದೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಘೋಷಣೆ ಮಾಡಿರುವ ಕೇಂದ್ರಗಳನ್ನೆ ಪುನಃ ಘೋಷಣೆ ಮಾಡಿದೆ.

ಇಂಡಿ-ಸಿಂದಗಿ ತಾಲೂಕುಗಳು ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು ಆಡಳಿತ ದೃಷ್ಟಿಯಿಂದ ಅವುಗಳ ವಿಭಜನೆ ಅವಶ್ಯವಾಗಿದೆ. ಇವುಗಳ ಮಧ್ಯವರ್ತಿ ಸ್ಥಳವಾಗಿರುವ ಆಲಮೇಲ ಪಟ್ಟಣ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳು ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಉಪ ಕಾಲುವೆ ಹಾಗೂ ಇಂಡಿ ಏತ ನೀರಾವರಿ ಕಾಕುವೆಗಳ ಮೂಲಕ ಸಂಪೂ ರ್ಣ ನೀರಾವರಿಗೆ ಒಳಪಟ್ಟಿವೆ.

ಆಲಮೇಲದ ಕೆ.ಪಿ.ಆರ್‌ ಸಕ್ಕರೆ ಕಾರ್ಖಾನೆ ಹಾಗೂ ಸಮಿಪದ 8 ಕಿ.ಮೀ. ಅಂತರಲ್ಲಿರುವ ನಾದ ಜಮಖಂಡಿ ಸಕ್ಕರೆ ಕಾರ್ಖಾನೆ ಮತ್ತು ಮಲಘಾಣ ಮನಾಲಿ ಸಕ್ಕರೆ ಕಾರ್ಖಾನೆಗಳೂ ಈ ಭಾಗದಲ್ಲಿ ನಿರ್ಮಾಣವಾಗಿದ್ದು ಈಗಾಗಲೆ ಮೂರೂ ಸಕ್ಕರೆ ಕಾರ್ಖಾನೆಗಳು ಚಾಲನೆಯಲ್ಲಿವೆ. ಸುಮಾರು 200 ಕೋಟಿ ರೂ. ವ್ಯವಹಾರದ ಪ್ರಮುಖ ವಾಣಿಜ್ಯ
ಕೇಂದ್ರವಾಗಿದ್ದು ಇದನ್ನು ಗಮನದಲ್ಲಿ ಇಟ್ಟುಕೊಂಡು ಆಲಮೇಲ ತಾಲೂಕು ಕೇಂದ್ರ ಮಾಡಿದರೆ ವ್ಯವಸಾಯ-ಕೈಗಾರಿಕೆಗಳ ಬೆಳೆವಣಿಗೆಗೆ ಉತ್ತೇಜನ ಸಿಗುತ್ತದೆ.

Advertisement

ಮೂರು ದಶಕಗಳ ಹಿಂದೆಯೇ ಇಲ್ಲಿನ ಭೌಗೋಳಿಕ ಸ್ಥಿತಿಗಳನ್ನು ಪರಿಶೀಲಿಸಿ ಸರ್ಕಾರ ನೇಮಿಸಿದ ವಾಸುದೇವರಾವ್‌ ಸಮಿತಿ ಆಲಮೇಲ ತಾಲೂಕು ರಚನೆಗೆ ಶಿಫಾರಸು ಮಾಡಿದೆ. ಹಾಗೆ ರಾಜ್ಯ ಸರ್ಕಾರ ತಾಲೂಕು ಕೇಂದ್ರದ ಪರಿಶೀಲನಾ ಸಮಿತಿ ನೇಮಕ ಮಾಡಿದ್ದು ಆ ಸಮಿತಿ ಸ್ಥಾನಿಕ ಸಮಿಕ್ಷೆ ಮಾಡದೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿಯೆ ವರದಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ತಾಲೂಕು ಕೇಂದ್ರಗಳ ಘೋಷಣೆಯಲ್ಲಿ ನಿರ್ಲಕ್ಷ್ಯ ವಹಿಸಿದೆ.

ಜಿಲ್ಲೆಯ 7 ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದು ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದರ ಹಿಂದೆ ರಾಜಕೀಯವಿದ್ದು ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎನ್ನುತ್ತಾರೆ ಈ ತಾಲೂಕು ಹೋರಾಟ ಸಮಿತಿ ಮುಖಂಡ ಶಿವಾನಂದ ಮಾರ್ಸನಳ್ಳಿ. 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣಾ ಸರಕಾರದ ಅವಧಿಯಲ್ಲಿ ತಾಲೂಕು ಕೇಂದ್ರಗಳನ್ನು ಪ್ರಸ್ತಾಪಿಸಿದಾಗ ಆಲಮೇಲ ತಾಲೂಕು ಕೇಂದ್ರ ಮಾಡುವಂತೆ ಅನೇಕ ಹೋರಾಟ ಜರುಗಿದ್ದವು. ಸುಮಾರು 45 ದಿನ ಬೇರೆ ಬೇರೆ ಗ್ರಾಮಸ್ಥರು, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಉಪವಾಸ ಸತ್ಯಾಗ್ರಹ ಮಾಡಿದ್ದರು.

ಪ್ರತಿಭಟನೆ ಉಗ್ರ ರೂಪ ತಾಳಿದಾಗ ರಾಜಕೀಯ ಕುಂತಂತ್ರದಿಂದ ಹೋರಾಟಗಾರರೊಂದಿಗೆ ಗ್ರಾಮದ 250ಕ್ಕೂ ಹೆಚ್ಚು ಅಮಾಯಕರು ಹಾಗೂ ಪೊಲೀಸರಿಂದ ಹೊಡತ ತಿಂದ 140ಕ್ಕೂ ಹೆಚ್ಚು ಜನ ಜೈಲು ಸೇರಬೇಕಾಯಿತು. ಸುಮಾರು ನಾಲ್ಕರಿಂದ ಐದು ವರ್ಷ ನ್ಯಾಯಾಲಯಕ್ಕೆ ಅಲೆದಾಡಿದ್ದರಿಂದ ಜನರಲ್ಲಿನ ಆಸಕ್ತ ಕುಂದಿತ್ತು. ಈಗ ಮತ್ತೆ ಹೋರಾಟ ಪ್ರಾರಂಭವಾಗಿದ್ದು ಏನಾಗುತ್ತದೋ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next