Advertisement

ಪ್ರವಾಸಿಗರ ನೆಚ್ಚಿನ ತಾಣ ಆಲಮಟ್ಟಿ

05:26 PM Jul 21, 2022 | Team Udayavani |

ಆಲಮಟ್ಟಿ: ಬೆಳಗ್ಗೆಯಿಂದಲೇ ಶುರುವಾಗುವ ತುಂತುರು ಮಳೆ, ಎಲ್ಲಿ ನೋಡಿದರಲ್ಲಿ ಹಸಿರಿನಿಂದ ಕಂಗೊಳಿಸುವ ಬೆಟ್ಟ-ಗುಡ್ಡಗಳು, ನಯನ ಮನೋಹರವಾಗಿ ಕಾಣುವ ಜಲಾಶಯ, ಕಣ್ಣಿಗೆ ಕಾಣುವಷ್ಟು ದೂರದವರೆಗೂ ಜಲರಾಶಿ, ಇಂಪಾಗಿ ಕೇಳುವ ಹಕ್ಕಿಗಳ ಚಿಲಿಪಿಲಿ ನಿನಾದ.ಇದು ನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ತಾಣ ಆಲಮಟ್ಟಿಯ ವೈಶಿಷ್ಟ್ಯತೆ.

Advertisement

ಹೌದು. ಬೃಹತ್‌ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ, ರಾಕ್‌ ಗಾರ್ಡನ್‌, ಮೊಘಲ್‌ ಗಾರ್ಡನ್‌, ಇಟಾಲಿಯನ್‌ ಗಾರ್ಡನ್‌, ಗೋಪಾಲಕೃಷ್ಣ ಗಾರ್ಡನ್‌, ಲವ-ಕುಶ, ಸಂಗೀತ ನೃತ್ಯ ಕಾರಂಜಿ, ಲೇಷರ್‌ ಶೋ, ಗುಲಾಬಿ ಗಾರ್ಡನ್‌, ತ್ರೀಡಿ ಪ್ರದರ್ಶನ, ರಾಕ್‌ ಉದ್ಯಾನದಲ್ಲಿ ನಿರ್ಮಿಸಿರುವ 7ಡಿ ಆಲಮಟ್ಟಿಯ ಆಕರ್ಷಣೆಯನ್ನು ಹೆಚ್ಚಿಸಿವೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರಾಗಿದ್ದ ಡಾ|ಎಸ್‌.ಎಂ. ಜಾಮದಾರ ಹಾಗೂ ಉಪ ಅರಣ್ಯಸಂರಕ್ಷಣಾಧಿಕಾರಿ ಕೆ.ಡಿ.ಉದಪುಡಿಯವರ ವಿಶೇಷ ಕಾಳಜಿಯಿಂದ ಬಂಡೆಗಲ್ಲು, ಇಳಿಜಾರು ಕಲ್ಲು ಹಾಸು ಹಾಗೂ ತಗ್ಗು- ಗುಂಡಿಗಳಿಂದ ತುಂಬಿದ್ದ ನೆಲ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ.

ಆಲಮಟ್ಟಿ ರೈಲು ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ಹೊಂದಿ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇರುತ್ತದೆ.

ಅಲುಗಾಡುವ ಗೋಡೆ

Advertisement

ಶಾಸ್ತ್ರಿ ಸಾಗರದ ಬಲಭಾಗದಲ್ಲಿರುವ ಲವ-ಕುಶ ಉದ್ಯಾನದಲ್ಲಿ ಹಸಿರಿನಿಂದ ಕಂಗೊಳಿಸುವ ವಿವಿಧ ಸಸ್ಯಗಳಿಂದ ಹಸಿರು ಗೋಡೆಯನ್ನು ನಿರ್ಮಿಸಲಾಗಿದೆ. ಜನ ಅಲುಗಾಡಿಸಿದರೆ ಸಾಕು ಸಂಪೂರ್ಣ ಬಾಗುತ್ತದೆ. ಕೈಬಿಟ್ಟರೆ ಮೊದಲಿನಂತೆ ಎದ್ದು ನಿಲ್ಲುತ್ತದೆ. ಇಲ್ಲಿ ಲವ-ಕುಶರ ಜೀವನ ಚರಿತ್ರೆ, ಶ್ರೀರಾಮ ಹಾಗೂ ಲವ-ಕುಶರ ಮಧ್ಯೆ ಅಶ್ವಮೇಧಯಾಗದ ಕುದುರೆ ಕಟ್ಟಿದ ಪರಿಣಾಮ ಯುದ್ಧ ಸೇರಿದಂತೆ ರಾಮಾಯಣದ ವಿವಿಧ ಪಾತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಶ್ರೀಕೃಷ್ಣನ ಬಾಲಲೀಲೆ

ಜಲಾಶಯದ ಬಲಭಾಗದಲ್ಲಿ ಹೊಂದಿಕೊಂಡಂತಿರುವ ಗೋಪಾಲಕೃಷ್ಣ ಉದ್ಯಾನದಲ್ಲಿ ಶ್ರೀಕೃಷ್ಣನು ಗೋವುಗಳನ್ನು ಮೇಯಿಸುವ ವೇಳೆ ನೀರಿನಲ್ಲಿ ಜಲಕನ್ಯೆಯರು ಚೆಲ್ಲಾಟವಾಡುವಾಗ ಅವರ ಬಟ್ಟೆಯನ್ನು ಕದ್ದೊಯ್ದಿರುವ ದೃಶ್ಯ, ತಾಯಿಯ ಕಣ್ತಪ್ಪಿಸಿ ಬೆಣ್ಣೆ ಕದಿಯುವುದು ಹೀಗೆ ಶ್ರೀಕೃಷ್ಣನ ಬಾಲ್ಯವನ್ನು ನೆನಪಿಸುವ ದೃಶ್ಯಗಳು ಮುದ ನೀಡುತ್ತವೆ.

ರಾಕ್‌ ಉದ್ಯಾನ

ಹಳೆ ರಾಷ್ಟ್ರೀಯ ಹೆದ್ದಾರಿಯಿಂದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರಕ್ಕೆ ಬರುವ ಮಾರ್ಗ ಮಧ್ಯದಲ್ಲಿ ರಾಕ್‌ ಉದ್ಯಾನವಿದೆ. ಇಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಯ ದೃಶ್ಯ, ಕಾಡು ಪ್ರಾಣಿಗಳು, ಪಕ್ಷಿಗಳು, ಕಾಡುಜನರ ಬದುಕು, ಚಿಣ್ಣರ ನೀರಾಟ, ಚಿಟ್ಟೆಗಳ ಜೀವನ ಚರಿತ್ರೆ, ಸರೀಸೃಪಗಳು, ಕಮಲದ ಹೂವು, ಸೂರ್ಯಪಾರ್ಕ್‌ನಲ್ಲಿ ಭಾರತ ನಕ್ಷೆ ಅದರ ಸುತ್ತಲೂ ಸರ್ವ ಜನಾಂಗಗಳ ಶಾಂತಿಯ ತೋಟವೆನ್ನುವ ಕವಿವಾಣಿಯನ್ನು ನೆನಪಿಸುವಂತೆ ವಿವಿಧ ಕಲಾಕೃತಿಗಳು, ದೋಣಿ ವಿಹಾರ, ಚಿಣ್ಣರ ಉದ್ಯಾನ, ಜೋಕಾಲಿ, ರಾಜಸ್ಥಾನ ಮರುಭೂಮಿಯ ಜನರ ಬದುಕು, ಗುಹಾಂತರ ಕಲೆ ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿದೆ.

ಯುಕೆಪಿ ಅಧಿಕಾರಿಗಳ ವಿಶೇಷ ಕಾಳಜಿಯ ಫಲವಾಗಿ ಹಾಸು ಬಂಡೆಗಳ ಮೇಲೆ ಸುಂದರ ಉದ್ಯಾನಗಳು ನಿರ್ಮಾಣವಾಗಿವೆ. ಹಿನ್ನೀರು ಪ್ರದೇಶದಲ್ಲಿ ಜಲಕ್ರೀಡೆಗಳು ನಡೆಯುವಂತಾಗಬೇಕು. – ಮಹಿಬೂಬ ವಾಲಿಕಾರ, ಸೊಲ್ಲಾಪುರ

ಉದ್ಯಾನಗಳನ್ನು ಆರಂಭಿಸಿದ್ದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಇದರಿಂದ ಸಣ್ಣ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. -ದೇವರಾಜ ಹಿರೇಮನಿ, ಆಲಮಟ್ಟಿ

ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿನ ಕಲಾಕೃತಿ, ಹಸಿರಿನಿಂದ ಕಂಗೊಳಿಸುವ ಗಿಡಮರಗಳು ಸೇರಿದಂತೆ ತುಂತುರು ಮಳೆಯ ನಡುವೆ ಇಲ್ಲಿನ ಸೌಂದರ್ಯ ನೋಡುವ ಸೌಭಾಗ್ಯ ದೊರಕಿರುವುದು ಸಂತಸವಾಗಿದೆ.  –ಶರಣಪ್ಪ ಮಂಕಣಿ, ಗದಗ

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next