ಆಲಮಟ್ಟಿ: ಸಾಕ್ಷಾತ್ ಚಾಮುಂಡೇಶ್ವರಿ ಅವತಾರವೆಂದೇ ಜನಜನಿತವಾಗಿರುವ ಪ್ರಸಿದ್ಧ ಚಂದ್ರಮ್ಮಾ ದೇವಿ ಜಾತ್ರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಆರಂಭಗೊಂಡಿತು.
ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದ ಹಿನ್ನೀರಿನಲ್ಲಿ ಗುರುವಾರ ಬೆಳಗಿನ ಜಾವದಿಂದಲೇ ನೂರಾರು ಭಕ್ತರು ಮಿಂದು ಮಡಿಯಾಗಿ ವಯೋಭೇದ ಹಾಗೂ ಲಿಂಗಭೇದವಿಲ್ಲದೇ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿ ಭಕ್ತಿ ಮೆರೆದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗುರುವಾರ ಬೆಳಗಿಜಾವ ದೇವಿಗೆ ಅಭಿಷೇಕ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಸಂಜೆಯಾದರೂ ಕೂಡ ದರ್ಶನ ಪಡೆಯುವವರ ಸಂಖ್ಯೆ ಏರಿಕೆಯಾಗುತ್ತಿತ್ತು.
ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಮಹಾರಾಷ್ಟ್ರದ ಮುಂಬೈ, ಕೊಲ್ಲಾಪುರ, ಪುಣೆ ಸೇರಿದಂತೆ ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಚಂದ್ರಮ್ಮಾದೇವಿ ದರ್ಶನಕ್ಕೆ ಆಗಮಿಸಿದ್ದರು. ತಮ್ಮ ಹರಕೆ ಹಾಗೂ ನೈವೇದ್ಯ ಅರ್ಪಿಸುವವರ ಸಂಖ್ಯೆ ಮಧ್ಯಾಹ್ನದ ನಂತರ ಅಧಿಕವಾಗಿತ್ತು.
ಜಿಲ್ಲೆಯ ವಿವಿಧ ಕಡೆಯಿಂದ ಎರಡು ದಿನ ಹೆಚ್ಚಾಗಿ ಜನ ಬರುತ್ತಾರೆ. ಜಾತ್ರೆಗೆ ಮಕ್ಕಳ ವಿವಿಧ ಮನೋರಂಜನಾ ಕ್ರೀಡೆಗಳು ಬಂದಿದ್ದು, ಅವುಗಳ ಆಡುವುದರಲ್ಲಿ ಯುವಕರು ಮತ್ತು ಮಕ್ಕಳು ತಲ್ಲೀನರಾಗಿದ್ದರು. ಮಿಠಾಯಿ ಅಂಗಡಿ, ಬಳೆ ಅಂಗಡಿ, ಮಕ್ಕಳ ಆಟಗಳ ಅಂಗಡಿಗಳನ್ನು ಹಾಕಲಾಗಿದ್ದು, ಲಂಬಾಣಿ ವಸ್ತ್ರಗಳ ಮಾರಾಟದ ಅಂಗಡಿಗಳು ಈ ಬಾರಿ ಗಮನ ಸೆಳೆದವು.