Advertisement

ಆಲಮಟ್ಟಿ: ಟೆಂಡರ್‌ ಪ್ಯಾಕೇಜ್‌ ಪದ್ದತಿಗೆ ವಿರೋಧ

06:08 PM Sep 21, 2022 | Shwetha M |

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದವತಿಯಿಂದ ಕರೆಯಲಾಗುತ್ತಿರುವ ಕಾಮಗಾರಿಗಳ ಟೆಂಡರ್‌ನ ಪ್ಯಾಕೇಜ್‌ ಪದ್ದತಿ ವಿರೋಧಿಸಿ ಆಲಮಟ್ಟಿ ಕೃಷ್ಣಾತೀರ ಗುತ್ತಿಗೆದಾರರ ಸಂಘದ ವತಿಯಿಂದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

Advertisement

ಮಂಗಳವಾರ ಮಧ್ಯಾಹ್ನ ಕೃಷ್ಣಾ ತೀರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲಕಾಜಪ್ಪ ಮೇಟಿ ಅವರ ನೇತೃತ್ವದಲ್ಲಿ ಕೆಬಿಜೆನ್ನೆಲ್‌ ಮುಖ್ಯ ಅಭಿಯಂತರರ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಸಿ.ಬಿ.ಅಸ್ಕಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನತೆ ಮನೆ-ಮಠ, ಜಮೀನುಗಳನ್ನು ತ್ಯಾಗಮಾಡಿದ್ದಾರೆ. ನಾರಾಯಣಪುರದ ಬಸವಸಾಗರ ಮತ್ತು ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಗಳ ಹಿನ್ನೀರಿಗಾಗಿ ನೂರಾರು ಗ್ರಾಮಗಳ ಜನರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತ ಸಂತ್ರಸ್ತರಾಗಿದ್ದಾರೆ. ಅವರಲ್ಲಿ ಕೆಲವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಬೃಹತ್‌ ಮೊತ್ತದ ಒಂದೊಂದು ಪ್ಯಾಕೇಜ್‌ ಟೆಂಡರ್‌ ಕರೆಯುತ್ತಿರುವದರಿಂದ ಈ ಭಾಗದ ಗುತ್ತಿಗೆದಾರರು ನಿರುದ್ಯೋಗಿಗಳಾಗುವಂತಾಗಿದೆ ಎಂದು ಆರೋಪಿಸಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ವಲಯದಲ್ಲಿ ಕರೆಯಾಗಿರುವ ಸಿಸಿ ರಸ್ತೆ, ವಿತರಣಾ ಕಾಲುವೆ, ಅಚ್ಚುಕಟ್ಟು ರಸ್ತೆಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಒಂದುಗೂಡಿಸಿ 30ರಿಂದ40ಕೋಟಿ ರೂ.ಗಳ ಮೊತ್ತದಲ್ಲಿ ಟೆಂಡರ್‌ ಕರೆಯುತ್ತಿರುವದರಿಂದ ನೂರಾರು ಗುತ್ತಿಗೆದಾರರು ನಿರುದ್ಯೋಗ ಸಮಸ್ಯೆ ಎದುರಿಸಲಿದ್ದಾರೆ ಎಂದು ಹೇಳಿದರು.

ಬೇರೆ ಬೇರೆ ಅಂದಾಜು ಪತ್ರಿಕೆಗಳನ್ನು ಒಂದುಗೂಡಿಸಿ ಟೆಂಡರ್‌ ಕರೆಯಬಾರದು ಎಂದು ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಅಧಿಕಾರಿಗಳು ಕೆಲವೇ ಜನ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಲು ಪ್ಯಾಕೇಜ್‌ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಬೇರೆ ವಿಧದ ಕಾಮಗಾರಿಗಳಿದ್ದರೂ ಅವುಗಳನ್ನು ಒಂದುಗೂಡಿಸಿದ್ದಾರೆ. ವಿತರಣಾ ಕಾಲುವೆಗಳಲ್ಲಿಯೂ ಬೇರೆ ಬೇರೆ ಕಿ.ಮೀ.ಗಳಲ್ಲಿ ಕಾಮಗಾರಿಗಳಿದ್ದರೂ ಅವುಗಳನ್ನೂ ಕೂಡ ಒಂದುಗೂಡಿಸಿದ್ದಾರೆ. ಹೀಗೆ ವ್ಯವಸ್ಥಿತವಾಗಿ ಸಣ್ಣ ಗುತ್ತಿಗೆದಾರರನ್ನು ಕಾಮಗಾರಿಗಳಿಂದ ಮುಕ್ತ ಮಾಡುವ ಹುನ್ನಾರ ಅಡಗಿದೆ ಎಂದು ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ಗುತ್ತಿಗೆದಾರ ಸಿ.ಜಿ.ವಿಜಯಕರ ಮಾತನಾಡಿ, ಇತ್ತೀಚೆಗೆ ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗದಲ್ಲಿ ಕರೆಯಲಾಗಿರುವ ಕಾಮಗಾರಿಗಳಿಗೆ ಹಳೆಯ ದರವನ್ನು ನಿಗದಿಪಡಿಸಲಾಗಿದೆ. ಅದನ್ನು ಹೊಸ ದರಕ್ಕೆ ಮಾರ್ಪಡಿಸಿ ಸಣ್ಣ ಗುತ್ತಿಗೆದಾರರಿಗೂ ಕಾಮಗಾರಿ ನಿರ್ವಹಿಸುವಂತೆ ಟೆಂಡರ್‌ ಕರೆಯಬೇಕು ಎಂದರು.

Advertisement

ಸಂಘದ ಅಧ್ಯಕ್ಷ ಮಲಕಾಜಪ್ಪ ಮೇಟಿ ಮಾತನಾಡಿ, ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ವಲಯ ಮುಖ್ಯ ಅಭಿಯಂತರರ ಕಚೇರಿ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಭಾಗಗಳಲ್ಲಿ ಕರೆಯಲಾಗಿರುವ ಪ್ಯಾಕೇಜ್‌ ಟೆಂಡರ್‌ ಪದ್ದತಿಯನ್ನು ರದ್ದುಗೊಳಿಸಬೇಕು ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಟೆಂಡರ್‌ ಕರೆಯಬೇಕು. ಈಗ ಕರೆಲಾಗಿರುವ ಪ್ಯಾಕೇಜ್‌ ಟೆಂಡರ್‌ ಪದ್ದತಿಯನ್ನು ಕೈಬಿಡಬೇಕು ಇಲ್ಲದಿದ್ದರೆ ಮುಖ್ಯ ಅಭಿಯಂತರರ ಕಚೇರಿಯ ಆವರಣದಲ್ಲಿ ಅರ್ನಿಷ್ಠ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಮನವಿಯನ್ನು ಉಪಮುಖ್ಯ ಅಭಿಯಂತರ ಡಿ.ಸುರೇಶ ಸ್ವೀಕರಿಸಿದರು. ರಾಯನಗೌಡ ತಾತರಡ್ಡಿ, ಜೆ.ಟಿ.ಇಲಕಲ್ಲ, ಎಚ್‌.ಟಿ.ಕುರಿ, ಎಸ್‌.ಐ.ಹಿರೇಮಠ, ಬಿ.ಪಿ.ರಾಠೊಡ, ವೈ.ವೈ.ಬಿರಾದಾರ, ಎಸ್‌.ಎಲ್‌.ಲಮಾಣಿ, ಪಿ.ಎಸ್‌ .ಬಯಾಪುುರ, ವೆಂಕಟೇಶ ನಾಯಕ, ಬಿ.ವಿ.ಮೈಲೇಶ್ವರ, ವೈ. ವೈ.ಚಲವಾದಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next