Advertisement

ಅಳದಂಗಡಿ: ಸುಸಜ್ಜಿತ ತಂಗುದಾಣವೇ ಇಲ್ಲಿನ ಪ್ರಥಮ ಆದ್ಯತೆ

09:55 AM Sep 07, 2018 | Team Udayavani |

ವೇಣೂರು: ಬೆಳ್ತಂಗಡಿ ತಾ|ನಲ್ಲಿಯೇ ವಿಶಾಲ ಜಂಕ್ಷನ್‌ ಹೊಂದಿರುವ ಊರು ಅಳದಂಗಡಿ. ಇಲ್ಲಿ ಒಂದು ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸಿದರೆ ಆಗುವ ಅನುಕೂಲ ಹತ್ತಾರು. ಇದರೊಂದಿಗೆ ಇಲ್ಲಿ ಅಪಘಾತ ಹೆಚ್ಚು ಎಂಬ ಅಪವಾದವನ್ನೂ ತೊಡೆದು ಹಾಕುವ ಹೊಣೆಗಾರಿಕೆ ಜನಪ್ರತಿನಿಧಿಗಳು, ಸ್ಥಳೀಯ ಗ್ರಾ. ಪಂ. ಗಳ ಮೇಲಿದೆ.

Advertisement

ಈ ಜಂಕ್ಷನ್‌ನಿಂದ ನಾರಾವಿಗೆ 13 ಕಿ.ಮೀ. ದೂರವಾದರೆ, ವೇಣೂರಿಗೂ ಅಷ್ಟೇ ಅಂತರ. ಬೆಳ್ತಂಗಡಿಯಿಂದ ಕಾರ್ಕಳ-ಉಡುಪಿ ರಾಜ್ಯ ಹೆದ್ದಾರಿ 37 ಹಾದು ಹೋಗುತ್ತದೆ. ಹಾಗಾಗಿ ಜನದಟ್ಟಣೆ ಮತ್ತು ವಾಹನ ದಟ್ಟಣೆ ತುಸು ಹೆಚ್ಚು. ಸಾಕಷ್ಟು ಖಾಸಗಿ ಬಸ್‌ಗಳ ಓಡಾಟವೂ ಇದೆ. ಧರ್ಮಸ್ಥಳ, ಶೃಂಗೇರಿ, ಉಡುಪಿ, ಮಂಗಳೂರಿಗೆ ನೇರ ಸಂಪರ್ಕ ಇರುವುದರಿಂದ ಯಾತ್ರಾರ್ಥಿಗಳ ವಾಹನಗಳ ಸಂಚಾರ ಅಧಿಕ. ಸುಲ್ಕೇರಿ ಗ್ರಾ.ಪಂ.ನ ಸುಲ್ಕೇರಿ, ನಾವರ, ಕುದ್ಯಾಡಿ ಸಂಪರ್ಕ ಹೊಂದಿರುವುದು ಅಳದಂಗಡಿ ಗ್ರಾಮಕ್ಕೆ. ಸುಲ್ಕೇರಿ ಗ್ರಾ.ಪಂ.ಕಚೇರಿಯೂ ಅಳದಂಗಡಿ ಗ್ರಾ.ಪಂ. ಕಚೇರಿ ಬಳಿಯೇ ಇರುವುದರಿಂದಎರಡೂ ಗ್ರಾ.ಪಂ.ಗಳ ಜನರು ಈ ಜಂಕ್ಷನ್‌ ಮೂಲಕವೇ ಹಾದು ಹೋಗಬೇಕಿದೆ. ವೇಣೂರಿಗೆ ಸೂಕ್ತ ಬಸ್‌ ವ್ಯವಸ್ಥೆಯಾದರೆ ಜಂಕ್ಷನ್‌ನ ಆರ್ಥಿಕ ಚಟುವಟಿಕೆ ಹೆಚ್ಚಾಗಬಹುದು.

ದ್ವಿಪಥ ಆಗಬೇಕು
ಈ ಜಂಕ್ಷನ್‌ ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಎನಿಸಿದೆ. ಅದಕ್ಕೆ ಇಲ್ಲಿ ನಡೆಯುವ ಅಪಘಾತಗಳೇ ಕಾರಣ. ಅದಕ್ಕೆ ಇಲ್ಲಿನ ಕರ್ಣಾಟಕಬ್ಯಾಂಕ್‌ನಿಂದ ಪೆಟ್ರೊಲ್‌ ಪಂಪ್‌ವರೆಗೆ ಹೆದ್ದಾರಿದ್ವಿಪಥವಾದರೆ ಸಮಸ್ಯೆ ಬಗೆಹರಿಯಬಹುದು.ಜತೆಗೆ ಸಾರ್ವಜನಿಕರಿಗೆ ಫ‌ುಟ್‌ಪಾತ್‌ ವ್ಯವಸ್ಥೆ ಕಲ್ಪಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಈ ಜಂಕ್ಷನ್‌ ಬಡಗಕಾರಂದೂರು, ಪಿಲ್ಯ, ತೆಂಕಕಾರಂದೂರು, ನಾವರ, ಕುದ್ಯಾಡಿ, ಸುಲ್ಕೇರಿ, ನಾಲ್ಕೂರು, ಬಳಂಜ, ಶಿರ್ಲಾಲು, ಕರಂಬಾರು, ಸುಲ್ಕೇರಿಮೊಗ್ರು, ಸೂಳಬೆಟ್ಟು ಗ್ರಾಮಗಳನ್ನು ಸಂಪರ್ಕಿಸುತ್ತದೆ.

ಯಾಕೆ ಜನದಟ್ಟಣೆ?
ಅಳದಂಗಡಿ-ಸುಲ್ಕೇರಿ ವ್ಯಾಪ್ತಿಯಲ್ಲಿ ಪ.ಪೂ. ಕಾಲೇಜು, 5 ಪ್ರೌಢಶಾಲೆ, 7 ಪ್ರಾ. ಶಾಲೆ, 4 ಕಿ.ಪ್ರಾ. ಶಾಲೆ, ಪ್ರಾ.ಆ. ಕೇಂದ್ರ, ಗ್ರಾಮಕರಣಿಕರ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌, 5 ಸಹಕಾರಿ ಸಂಘಗಳು, ಪಶು ಆಸ್ಪತ್ರೆ, 7 ಹಾಲು ಉತ್ಪಾದಕರ ಸಹಕಾರ ಸಂಘಗಳು, ಅರಣ್ಯ ನರ್ಸರಿ, ವಿದ್ಯಾರ್ಥಿ ನಿಲಯ, 6 ಅಂಚೆ ಕಚೇರಿ, ಪೆಟ್ರೋಲ್‌ ಪಂಪ್‌, ಸಂತೆ ಮಾರುಕಟ್ಟೆ, ಜಂಕ್ಷನ್‌ ಬಳಿ 3 ಕ್ಲಿನಿಕ್‌ ಗಳು, ಎಪಿಎಂಸಿ ಕಟ್ಟಡ, ದೈವ-ದೇವಸ್ಥಾನ, ಚರ್ಚ್‌, ಮಸೀದಿಗಳಿವೆ. ಜಂಕ್ಷನ್‌ ಬಳಿಯೇ ಪಂ. ಕಚೇರಿ, ಪ್ರಾ.ಆ. ಕೇಂದ್ರ, ಸಹಕಾರಸಂಘಗಳು, ಪೆಟ್ರೋಲ್‌ ಪಂಪ್‌ ಇರುವುದು ಪ್ಲಸ್‌ಪಾಯಿಂಟ್‌. ಆದರೆ ಸುಸಜ್ಜಿತ ಶೌಚಾಲಯವಿಲ್ಲ. ಈಗಿರುವ ಶೌಚಾಲಯವೂ ಪಂ. ಕಟ್ಟಡದ ಹಿಂಬದಿ ಇದೆ. ಇನ್ನಷ್ಟು ಸುಸಜ್ಜಿತಗೊಳ್ಳಬೇಕು.ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಇದ್ದರೂ ಕಾಣದಂತಿದೆ. ಇವೆಲ್ಲವೂ ಸರಿಯಾದರೆ ಪ್ರಯೋಜನವಾಗಲಿದೆ. ಕಸ ಸಂಗ್ರಹದ ತೊಟ್ಟಿ ಅಳವಡಿಸಬೇಕು. ನಿಲ್ದಾಣ ಬಳಿಯೇ ರಿಕ್ಷಾ, ಪಿಕ್‌ ಅಪ್‌ ಪಾರ್ಕಿಂಗ್‌ ವ್ಯವಸ್ಥೆ ಇದೆ.

ಈಗಿರುವ ನಿಲ್ದಾಣಗಳು ಹೇಗಿವೆ?
ಜಂಕ್ಷನ್‌ನಲ್ಲಿ 2 ಬಸ್‌ ನಿಲ್ದಾಣಗಳಿವೆ. ಆದರೆ ಕಿರಿದು. ಗಾಳಿ, ಮಳೆ ಬಂದರೆ ಪ್ರಯಾಣಿಕರು ಅಂಗಡಿ ಬಳಿ ನಿಲ್ಲಬೇಕು. ಬೆಳ್ತಂಗಡಿಯಿಂದ ರಾಜ್ಯ ಹೆದ್ದಾರಿ ಮೂಲಕ ನಾರಾವಿಗೆ ಸಾಗುವ ಬಸ್‌ ಗಳು ಜಂಕ್ಷನ್‌ ವೃತ್ತಕ್ಕೆ ಬಂದುಹೋಗುತ್ತವೆ. ಆದರೆ ನಾರಾವಿಯಿಂದ ಬೆಳ್ತಂಗಡಿಗೆ ಹೋಗುವ ಬಸ್‌ಗಳು ವೃತ್ತಕ್ಕೆ ಬಾರದೇ ಹೆದ್ದಾರಿಯಲ್ಲೇ ನಿಲ್ಲಿಸಿ ಹೋಗುತ್ತವೆ. ಇದರ ಬದಲು ಅವುಗಳೂ ಜಂಕ್ಷನ್‌ ಗೆ ಬಂದು ಹೋಗುವಂತಾದರೆ ಜನರು ಬಸ್‌ಗಳಿಗಾಗಿ ಒಂದೆಡೆ ಕಾದು ನಿಲ್ಲುತ್ತಾರೆ. 

Advertisement

ಸಾಂಸ್ಕೃತಿಕ ನಗರಿ
ಅಳದಂಗಡಿ ಹಲವು ನದಿಗಳಿಂದ ಸುತ್ತುವರಿದಿರುವ ಗ್ರಾಮವಿದು. ಹಚ್ಚ ಹಸುರಿನಿಂದ ಕೂಡಿರುವ ಪ್ರಕೃತಿ ರಮಣೀಯ ಸ್ಥಳ. ಅಜಿಲ ಅರಸರ ಮನೆತನಗಳಿಂದ ಧಾರ್ಮಿಕ ವಿಶೇಷ ಹಿನ್ನೆಲೆ ಹೊಂದಿದೆ. ಬೆಳ್ತಂಗಡಿತಾಲೂಕು ಕೇಂದ್ರದಿಂದ ಸರಿಸುಮಾರು12 ಕಿ.ಮೀ. ದೂರದಲ್ಲಿರುವ ಅಳದಂಗಡಿಯನ್ನು ಅರುವ ಅಂತಲೂ ಸಾಂಸ್ಕೃತಿಕ ನಗರಿ ಅಂತಲೂ ಕರೆಯುತ್ತಾರೆ.

ತಂಗುದಾಣ
ಸಾರ್ವಜನಿಕ ಶೌಚಾಲಯ, ವಿಶಾಲ ಬಸ್‌ ತಂಗುದಾಣ ನಿರ್ಮಿಸಲಾಗುವುದು. ಪಿಡಬ್ಲ್ಯುಡಿ ಎಂಜಿನಿಯರ್‌ ಜತೆ ಸಂಪರ್ಕದಲ್ಲಿದ್ದು, ನಿಲ್ದಾಣದ ಪೂರ್ಣ ಡಾಮರು ಕಾಮಗಾರಿಗೆ ಒತ್ತಾಯಿಸಿದ್ದೇವೆ. ಎಲ್ಲ ಬಸ್‌ಗಳು ನಿಲ್ದಾಣಕ್ಕೆ ಬರುವಂತೆ ಮಾಡಲಾಗುವುದು. ರೈತ ಸಂಪರ್ಕ ಕೇಂದ್ರ, ನಾಡಕಚೇರಿ, ಪ್ರಾ.ಆ. ಕೇಂದ್ರ ಮೇಲ್ದರ್ಜೆಗೆ ಹಾಗೂ 108 ಆ್ಯಂಬುಲೆನ್ಸ್‌ ವ್ಯವಸ್ಥೆಯ ಬೇಡಿಕೆ ನಮ್ಮದು. ಸಂತೆಕಟ್ಟೆಗೆ ಇಂಟರ್‌ಲಾಕ್‌ ಹಾಗೂ ಸಂತೆಕಟ್ಟೆ ರಸ್ತೆಯ ಕಾಂಕ್ರೀಟ್‌ಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. 
– ಸತೀಶ್‌ ಕುಮಾರ್‌ ಮಿತ್ತಮಾರು
ಅಧ್ಯಕ್ಷರು, ಗ್ರಾ.ಪಂ. ಅಳದಂಗಡಿ 

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next