Advertisement
ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ಮುತ್ತು, ರತ್ನ… ಇತ್ಯಾದಿ, ಬೆಲೆಬಾಳುವ ವಸ್ತುಗಳ ಖರೀದಿ, ಗೃಹಪ್ರವೇಶ, ಭೂಮಿ ಪೂಜೆ, ವ್ಯಾಪಾರ ವಹಿವಾಟಿನಲ್ಲಿ ಹಣ ತೊಡಗಿಸಿ ಕಾರ್ಯ ಪ್ರಾರಂಭಿಸಿದರೆ ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಾ, ಕೈಗೊಂಡ ಕೆಲಸಗಳೆಲ್ಲವೂ ಅಕ್ಷಯವಾಗುವುದೆಂದು ನಂಬಲಾಗಿದೆ. ರೈತರು ಹೊಲದಲ್ಲಿ ಮೊಟ್ಟ ಮೊದಲು ಉತ್ತುಬಿತ್ತುವುದಕ್ಕೂ ಇದು ಪುಣ್ಯ ಮುಹೂರ್ತ. ಹೊಸ ಉದ್ಯಮ, ಉದ್ಯೋಗಗಳನ್ನು ಪ್ರಾರಂಭಿಸಲು ಇದಕ್ಕಿಂತ ಪ್ರಶಸ್ತ ದಿನ ಮತ್ತೂಂದಿಲ್ಲ.
Related Articles
Advertisement
ವೇದವ್ಯಾಸರು, ಮುದ್ದು ಗಣಪತಿ ಹಾಕಿದ ಕರಾರಿಗೆ ಒಪ್ಪಿ ಮಹಾಭಾರತ ಬರೆಯಲು ಆರಂಭಿಸಿದ ಶುಭ ದಿನವೂ ಇದೇ. ಪಾಂಡವರು ವನವಾಸದಲ್ಲಿದ್ದಾಗ ಶ್ರೀ ಕೃಷ್ಣನ ಆದೇಶದಂತೆ ಸೂರ್ಯದೇವನನ್ನು ಪ್ರಾರ್ಥಿಸಿ
ಅಕ್ಷಯ ಪಾತ್ರೆ ಪಡೆದಿದ್ದು ಇದೇ ದಿನ. ಕರು ನಾಡ ದೇವಿ ಚಾಮುಂಡೇಶ್ವರಿ ಮಹಿಷಾ ಸುರರನ್ನು ಸಂಹಾರ ಮಾಡಿ ಜಗತ್ತಿನ ಕಂಟಕವನ್ನು ಕಳೆದಿದ್ದೂ ಈ ದಿನವೇ.
ಮಹಾವಿಷ್ಣುವು ತನ್ನರಸಿ ಲಕ್ಷ್ಮೀಯೊಡ ಗೂಡಿ ಇದೇ ದಿನ ಗಂಗಾಪೂಜೆ ಸಲ್ಲಿಸಿದ್ದ ರಿಂದ ಗಂಗಾಸ್ನಾನಕ್ಕೂ ಮಹತ್ವವಿದೆ. ಭಗೀರಥನ ಅವಿರತ ಪ್ರಯತ್ನಕ್ಕೆ ಒಲಿದು ಗಂಗಾ ಮಾತೆಯು ಭುವಿಗೆ ಇಳಿದಿದ್ದೂ ಅಕ್ಷಯ ತೃತೀಯದ ಪುಣ್ಯದಿನವೇ.
ಅಕ್ಷಯ ತೃತೀಯ ಭೂಮಿಗೆ ಬಂಗಾರ ತಂದ ದಿನ ಮಾತ್ರವಲ್ಲ, ಬಂಗಾರಕ್ಕಿಂತಲೂ ಮಿಗಿಲಾದ ಮಹಾ ಪುರುಷರನ್ನು ಈ ಭೂಮಿಗಿತ್ತ ದಿನವೂ ಹೌದು. ದಶಾವತಾರಗಳಲ್ಲಿ ಒಂಬತ್ತನೆಯದಾದ ಪರಶುರಾಮನ ಅವತಾರವಾಗಿದ್ದು ಈ ದಿನದಂದು. ಹನ್ನೆರಡನೇ ಶತ ಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರ ಜನ್ಮದಿನವೂ ಇಂದೇ. ಹಿಂದೂ ಧರ್ಮದ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಹುಟ್ಟಿದ ದಿನ, ಸಿಖ್ ಮತದ ಸ್ಥಾಪಕ ರಾದ ಗುರುನಾನಕರು ಜನಿಸಿದ್ದೂ ಅಕ್ಷಯ ತೃತೀಯದ ಪರಮ ಪಾವನ ದಿನದಲ್ಲಿಯೇ.
ಅಕ್ಷಯ ತದಿಗೆಯು ಬಿರುಬೇಸಗೆಯ ವೈಶಾಖ ಮಾಸದಲ್ಲಿ ಬರುವುದರಿಂದ ಈ ದಿನ, ಗುರು-ಹಿರಿಯರನ್ನು, ಬಂಧು-ಮಿತ್ರರನ್ನು ಮನೆಗಳಿಗೆ ಆಹ್ವಾನಿಸಿ ಪಾನಕ, ಪನಿವಾರಗಳನ್ನು ಕೊಟ್ಟು, ಯಥಾಶಕ್ತಿ ದಾನಧರ್ಮಾದಿ ಗಳನ್ನು ಮಾಡುವ ಸಂಪ್ರದಾಯ
ವಿದೆ. ಮಾವಿನ ಹಣ್ಣು ಈ ಸಮಯದಲ್ಲಿ ಅಧಿಕವಾಗಿ ಲಭ್ಯವಿರುವುದರಿಂದ ಆ ಹಣ್ಣನ್ನು, ತಾಂಬೂಲ, ದಕ್ಷಿಣೆ ಯೊಂದಿಗೆ ದಾನವಾಗಿ ಕೊಡುವ ಪದ್ಧತಿಯೂ ಇದೆ. ಈಗ ಕೊರೊನಾ ಮಹಾಮಾರಿಯ ಅಬ್ಬರ ಎÇÉೆಲ್ಲೂ ಮಿತಿಮೀರಿ ಹಬ್ಬದ ಎಲ್ಲ ಆಚರಣೆಗಳಿಗೂ ಕಡಿವಾಣ ಹಾಕಿದೆ. ಈ ಸಂಕಟ ಸಮಯದಲ್ಲಿ ಹೊರಗೆಲ್ಲ ಸುತ್ತಾಡಿ, ಆಪತ್ತನ್ನು ಆಹ್ವಾನಿಸಿಕೊಳ್ಳುವ ಬದಲು, ಮನೆಯೊಳಗಿನ ಸುರಕ್ಷಿತ ಆವರಣದಲ್ಲಿ ಕುಳಿತು ದೇವರ ಧ್ಯಾನ,
ಮನಸ್ಸಿಗೆ ನೆಮ್ಮದಿ ಕೊಡುವ ಮಂತ್ರ ಸ್ತೋತ್ರಗಳ ಪಾರಾಯಣ ಮಾಡ ಬಹುದು. ಈ ದಿನದಂದು ಮಾಡುವ ಜಪ- ತಪಗಳಿಗೂ ಅಧಿಕ ಫಲವಿದೆ. ಸಾಲಸೋಲ ಮಾಡಿ ಕೈಗೆಟುಕದಂತೆ ಮೇಲೇರಿ ಕುಳಿತಿರುವ ಚಿನ್ನ ಖರೀದಿಸುವ ಹಂಬಲ ನಮಗೇಕೆ? ಈ ಬದುಕು ಪ್ರತಿನಿತ್ಯವೂ ನಮಗೆ ತಂದುಕೊಡುವ ಅಸಂಖ್ಯ ಸಣ್ಣಪುಟ್ಟ ಖುಷಿಗಳೇ ದೊಡ್ಡ ಉಡುಗೊರೆಯಲ್ಲವೇ? ಈ ಭೂಮಿಯ ಮೇಲಿನ ಬಡತನ ನೀಗಿ, ನಗು- ನೆಮ್ಮದಿಗಳು ಅಕ್ಷಯವಾಗಿರಲಿ. ಪ್ರಪಂಚದ ಎಲ್ಲ ಜೀವರಾಶಿಗಳಿಗೆ ಆರೋಗ್ಯ-ನೆಮ್ಮದಿಯನ್ನು ಈ ಅಕ್ಷಯ ತೃತೀಯ ತುಂಬಿ ತರಲೆಂದು ಹಾರೈಸೋಣ.