Advertisement

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

01:47 AM Jan 22, 2022 | Team Udayavani |

ಪುತ್ತೂರು: ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಸುಳ್ಯದ ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್‌ನಲ್ಲಿರುವ ಪರಿಶಿಷ್ಟ ಜಾತಿಯ ಮಾಯಿಲ ಸಮುದಾಯದ ಕುಟುಂಬಗಳು ಸರಕಾರಿ ಗುರುತಿನ ಚೀಟಿ ಇಲ್ಲದೆ ಪಡಿತರ ಇತ್ಯಾದಿ ಸೌಲಭ್ಯಗಳಿಂದ ವಂಚಿತವಾಗಿದ್ದ ಕುರಿತು ಉದಯವಾಣಿ ಪ್ರಕಟಿಸಿದ ವರದಿಯ ಪರಿಣಾಮ ಕಾಲನಿ ನಿವಾಸಿಗಳಿಗೋಸ್ಕರ ಆಧಾರ್‌ ಕಾರ್ಡ್‌ ನೋಂದಣಿ ಶಿಬಿರ ನಡೆಯಿತು.

Advertisement

ಅಕ್ಕೋಜಿಲ್‌ಪಾಲ್‌ನಲ್ಲಿ 100ಕ್ಕೂ ಅಧಿಕ ವರ್ಷಗಳಿಂದ ಮಲೆಯಾಳ ಮಾತೃಭಾಷಿಕ ಮಾಯಿಲ ಕುಟುಂಬಗಳು ನೆಲೆಸಿವೆ. ನಾಲ್ಕೈದು ಮಂದಿಯ ಹೆಸರಿನಲ್ಲಿದ್ದ ಜಾಗವನ್ನು 18 ವರ್ಷಗಳ ಹಿಂದೆ ನವಗ್ರಾಮ ಯೋಜನೆಯಡಿ 21 ಕುಟುಂಬಗಳಿಗೆ ತಲಾ 3 ಸೆಂಟ್ಸ್‌ನಂತೆ ವಿಭಾಗಿಸಿ ನೀಡಿ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗಿತ್ತು. ಇಲ್ಲಿರುವ 60 ಮಂದಿಯ ಪೈಕಿ ಹೆಚ್ಚಿನವರಿಗೆ ಆಧಾರ್‌ ಕಾರ್ಡ್‌ ಇಲ್ಲ.

ಸರಕಾರ ಸಮುದಾಯದ ಏಳಿಗೆಗೋಸ್ಕರ ಘೋಷಿಸುವ ಯೋಜನೆಗಳ ಸೌಲಭ್ಯ ಪಡೆಯಲು ಯಾವುದೇ ದಾಖಲೆಗಳು ಅವರಲ್ಲಿಲ್ಲ. 3 ಸೆಂಟ್ಸ್‌ ಜಾಗ, ಅದರಲ್ಲಿ ಮುರುಕು ಜೋಪಡಿಯಷ್ಟೇ ಅವರದ್ದಾಗಿತ್ತು. ಕೆಲವು ಮನೆಗಳಲ್ಲಿ ಶೌಚಾಲಯವೂ ಸರಿ ಇಲ್ಲದಿರುವ ಬಗ್ಗೆ ಉದಯವಾಣಿ 2021ರ ಮೇ 30ರಂದು ಸಮಗ್ರ ವರದಿ ಪ್ರಕಟಿಸಿತ್ತು. ಶುಕ್ರವಾರ ಮಂಗಳೂರಿನಿಂದ ಆಗಮಿಸಿದ ಅಧಿಕಾರಿಗಳ ತಂಡ ಅಮರಮುಟ್ನೂರು ಗ್ರಾ.ಪಂ. ಸಭಾಂಗಣದಲ್ಲಿ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ ಪ್ರಕ್ರಿಯೆ ನಡೆಸಿತು. 19 ಮಂದಿಗೆ ಶೀಘ್ರ ಆಧಾರ್‌ ಕಾರ್ಡ್‌ ದೊರೆಯಲಿದ್ದು ಬಳಿಕ ಪಡಿತರ ಚೀಟಿ ನವೀಕರಣಗೊಂಡು ಪಡಿತರವೂ ದೊರೆಯಲಿದೆ.

ತಹಶೀಲ್ದಾರ್‌ ಅನಿತಾಲಕ್ಷ್ಮೀ, ಜಿ.ಪಂ. ಮಾಜಿ ಸದಸ್ಯ ಎಸ್‌.ಎನ್‌.ಮನ್ಮಥ, ತಾ.ಪಂ. ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ರಾ.ಪಂ. ಅಧ್ಯಕ್ಷೆ ಪದ್ಮಪ್ರಿಯಾ, ಸದಸ್ಯರಾದ ರಾಧಾಕೃಷ್ಣ ಕೊರತ್ತಡ್ಕ, ಕೃಷ್ಣ ಪ್ರಸಾದ್‌ ಮಾಡಬಾಕಿಲು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next