Advertisement
ಅತ್ಯಂತ ಕಡಿಮೆ ಶುಲ್ಕ ಪಾವತಿಸಿ ವಿಶ್ವವಿದ್ಯಾಲಯ ದರ್ಜೆಯ ಸುಸಜ್ಜಿತ ಸೌಲಭ್ಯದ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಕೇಂದ್ರದ ಬಗ್ಗೆಯೇ ಆಡಳಿತ ವರ್ಗದಲ್ಲಿ ಇಚ್ಛಾಶಕ್ತಿ ಕೊರತೆ ರಾರಾಜಿಸಿದೆ. ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಚ್ಚಿ ಹೋಗಿದ್ದ ವಿಜ್ಞಾನ ವಿಭಾಗ ತೆರೆಯಲು ನಾಲ್ಕು ಜನ ಉಪನ್ಯಾಸಕರು ಮನಸ್ಸು ಮಾಡಿದ ಪರಿಣಾಮ ಕಾಲೇಜಿನ ಸೀಟುಗಳೇ ಭರ್ತಿಯಾಗಿವೆ. ಅಕ್ಕಮಹಾದೇವಿ ವಿವಿ ಸೆಂಟರ್‌ನಲ್ಲಿ ಲಭ್ಯ ಇರುವ ಸೀಟು ಭರ್ತಿ ಮಾಡಲು ಯಾರೊಬ್ಬರೂ ಪ್ರೋತ್ಸಾಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸಿಕ್ಕರೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
Related Articles
Advertisement
ಸೌಲಭ್ಯವಿದ್ದರೂ ಸದ್ಬಳಕೆಯಿಲ್ಲ
ಮಹಿಳೆಯರಿಗಾಗಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಪಿಜಿ ಮತ್ತು ಯುಜಿ ಕೇಂದ್ರ ಸಿಕ್ಕರೂ ಅದನ್ನು ಬಳಸಿಕೊಂಡು ಬಡವರಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ನಿರಾಸಕ್ತಿ ವ್ಯಾಪಿಸಿದೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ವಿವಿ ಕೇಂದ್ರದ ಬೃಹತ್ ಕಟ್ಟಡದಲ್ಲಿ ಏಳೆಂಟು ಸಿಬ್ಬಂದಿ ಮಾತ್ರ ಇರುತ್ತಾರೆ. ಅಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಭಾಗದ ಕೊಠಡಿ, ಬೆಂಚ್ ಸೌಲಭ್ಯವೂ ಇದೆ. ಯಾವುದೇ ಖಾಸಗಿ ಶಿಕ್ಷಣ ಹೊಂದಿಲ್ಲದಂತಹ ಬೃಹತ್ ಕಟ್ಟಡ ಹೊಂದಿದ ಏಕೈಕ ಕೇಂದ್ರವಾದರೂ ಅಲ್ಲಿ ಪ್ರವೇಶಾಂತಿ ಹೆಚ್ಚಿಸುವ ಪ್ರಕ್ರಿಯೆಗಳು ಮಂಕಾಗಿದ್ದು, ಬಡವರ ಪಾಲಿಗೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.
ಉನ್ನತ ಶಿಕ್ಷಣ ಮರೀಚಿಕೆ
ಮಹಿಳೆಯರಿಗೆ ಅತ್ಯುನ್ನತ ದರ್ಜೆಯ ಶಿಕ್ಷಣ ನೀಡಲಿಕ್ಕಾಗಿ ಸರ್ಕಾರ 10 ಕೋಟಿ ರೂ. ಗೂ ಹೆಚ್ಚಿನ ಮೊತ್ತ ವ್ಯಯಿಸಿದ್ದರೂ ಅಲ್ಲಿ ಸಂಸ್ಥೆಯ ಮಹತ್ವ ಸಾರುವ ಕೆಲಸವೇ ನಡೆಯುತ್ತಿಲ್ಲವೆಂಬ ವೇದನೆ ಹಲವರಿಗೆ ಕಾಡಲಾರಂಭಿಸಿದೆ. ಖಾಸಗಿ ಲಾಬಿಯ ಪ್ರಭಾವ ಇಲ್ಲವೇ ಸಿಬ್ಬಂದಿ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಈ ನಡುವೆ ಇರುವ ರಸ್ತೆ ಸುಧಾರಿಸುವ ನಿಟ್ಟಿನಲ್ಲಿ ಆಡಳಿತ ವರ್ಗವೂ ಮನಸ್ಸು ಮಾಡದ್ದರಿಂದ ಬಡ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮರೀಚಿಕೆ ಎಂಬಂತಾಗಿದೆ.
-ಯಮನಪ್ಪ ಪವಾರ