ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಕ್ಷಿಪ್ರವಾಗಿ ಆಡಳಿತವನ್ನು ಕೈವಶಪಡಿಸಿಕೊಳ್ಳುತ್ತಲೇ, ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸಾವಿರಾರು ಕೋಟಿ ರೂಪಾಯಿ ಹಣದೊಂದಿಗೆ ದೇಶ ಬಿಟ್ಟು ಪರಾರಿಯಾಗಿದ್ದರು. ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಅಫ್ಘಾನ್ ಜನರು ನಲುಗಿ ಹೋಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ಅಕ್ಷರಶಃ ಗನ್ ಪಾಯಿಂಟ್ ಮೂಲಕ ಅಫ್ಘಾನ್ ಜನರನ್ನು ಲೂಟಿಗೈದಿರುವುದಾಗಿ ಸಿಎನ್ ಎನ್ ನ್ಯೂಸ್ 18 ವರದಿ ಮಾಡಿದೆ.
ಕಾಬೂಲ್ ನಲ್ಲಿರುವ ಅಫ್ಘಾನ್ ಅಧ್ಯಕ್ಷರ ಅರಮನೆಯನ್ನು ತಾಲಿಬಾನ್ ಕೈವಶ ಮಾಡಿಕೊಂಡ ಕೆಲವೇ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದೆ. ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ಕೂಡಲೇ ಕಾಬೂಲ್ ಮತ್ತು ಇತರ ನಗರಗಳಲ್ಲಿ ಚೆಕ್ ಪಾಯಿಂಟ್ ಗಳನ್ನು ನಿರ್ಮಿಸಿ ಚಾರಿಟಿ ಹೆಸರಿನಲ್ಲಿ ಲಷ್ಕರ್ ಮತ್ತು ಜೈಶ್ ಉಗ್ರರು ಬಲವಂತವಾಗಿ ಜನರಿಂದ ಹಣವನ್ನು ಸಂಗ್ರಹಿಸಿದ್ದರು!
ಟಿವಿ, ಫ್ರಿಡ್ಜ್ ಅನ್ನು ಹೊತ್ತೊಯ್ದಿದ್ದ ಉಗ್ರರು!
ಅಫ್ಘಾನಿಸ್ತಾನದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದಾಳಿ ಇಟ್ಟಿದ್ದ ಲಷ್ಕರ್, ಜೈಶ್ ಉಗ್ರರು ಟಿವಿ ಸೆಟ್ಸ್, ರೆಫ್ರಿಜರೇಟರ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನೂ ಹೊತ್ತೊಯ್ದಿದ್ದಾರಂತೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಲೂಟಿಗೈದಿರುವುದಾಗಿ ವರದಿ ವಿವರಿಸಿದೆ.
ಅಫ್ಘಾನಿಸ್ತಾನದಲ್ಲಿ ಐಎಸ್ ಐ ಕಾರ್ಯತಂತ್ರ!
ಅಫ್ಘಾನಿಸ್ತಾನದಲ್ಲಿ ಈ ಮೊದಲು ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ತಾಲಿಬಾನ್ ಜತೆಗೂಡಿ ಹಲವು ನಗರಗಳಲ್ಲಿ ಅಫ್ಘಾನ್ ಮತ್ತು ಅಮೆರಿಕ ಸೇನಾ ಪಡೆ ವಿರುದ್ಧ ಹೋರಾಟ ನಡೆಸುತ್ತಿತ್ತು. ಅಲ್ಲದೇ ಲಷ್ಕರ್ ಎ ತೊಯ್ಬಾ ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಬೃಹತ್ ಶಿಬಿರದ ಒಂದು ಭಾಗವಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಕ್ಯಾಂಪ್ ಅನ್ನು ತಾಲಿಬಾನ್ ಮುನ್ನಡೆಸುತ್ತಿದೆ ಎಂದು ವರದಿ ಹೇಳಿದೆ.
ಪಾಕಿಸ್ತಾನ ಉಗ್ರರಿಗೆ ಸ್ವರ್ಗ ಎಂಬ ಎಫ್ ಎಟಿಎಫ್ ನ ಹಸಿರು ಪಟ್ಟಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪಾಕ್ ಅಫ್ಘಾನ್ ನೆಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಷ್ಕರ್ ಮತ್ತು ಜೈಶ್ ಉಗ್ರಗಾಮಿ ಸಂಘಟನೆಯ ಶಿಬಿರಗಳನ್ನು ಹೊಂದಲು ಬಯಸಿದೆ. ಇದರೊಂದಿಗೆ ಭಯೋತ್ಪಾದಕ ಚಟುವಟಿಕೆಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ವ್ಯವಸ್ಥಿತವಾಗಿ ಸ್ಥಳಾಂತರಿಸಿದೆ. ಈ ಎಲ್ಲಾ ಕಾರ್ಯತಂತ್ರದ ಹಿಂದೆ ಐಎಸ್ ಐ ಸಕ್ರಿವಾಗಿದೆ. ತಾಲಿಬಾನ್ ಅಫ್ಘಾನ್ ಆಡಳಿತವನ್ನು ತೆಕ್ಕೆಗೆ ತೆಗೆದುಕೊಂಡ ಕೂಡಲೇ ತಾಲಿಬಾನ್, ಪಾಕ್ ನ ಐಎಸ್ ಐ ಆತ್ಮಾಹುತಿ ಸ್ಕ್ವಾಡ್ ಗಳು ಅಫ್ಘಾನ್ ಸರ್ಕಾರದ ಹಿರಿಯ ಅಧಿಕಾರಿಗಳು, ಎನ್ ಡಿಎಸ್ ಮತ್ತು ಭದ್ರತಾ ಸಿಬಂದಿಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆಗೆ ಮುಂದಾಗಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ನೂತನ ಅಫ್ಘಾನಿಸ್ತಾನ್ ಇಸ್ಲಾಮಿಕ್ ಎಮಿರೇಟ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಕ್ಕಾನಿ ನೆಟ್ವರ್ಕ್ ನಾಯಕತ್ವಕ್ಕೆ ಪ್ರಮುಖ ಹುದ್ದೆಯನ್ನು ಕೊಡಬೇಕೆಂದು ಇತ್ತೀಚೆಗೆ ತಾಲಿಬಾನ್ ನಿಯೋಗದ ಜತೆ ನಡೆದ ಮಾತುಕತೆಯಲ್ಲಿ ಪಾಕ್ ಸರ್ಕಾರ ಮನವಿ ಮಾಡಿಕೊಂಡಿದೆಯಂತೆ. ಸರ್ಕಾರದಲ್ಲಿ ಪ್ರಮುಖ ಹುದ್ದೆ ಜತೆಗೆ ತಾಲಿಬಾನ್ ಹಕ್ಕಾನಿ ನೆಟ್ವರ್ಕ್ ನ ಸಿರಾಜುದ್ದೀನ್ ಹಕ್ಕಾನಿಗೆ ಸ್ವಯಂ ಆಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಬೇಕೆಂದು ಪಾಕ್ ಕೇಳಿಕೊಂಡಿದೆ. ತಾಲಿಬಾನ್ ನೇತೃತ್ವದ ಅಫ್ಘಾನ್ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪಾಕ್ ನ ಐಎಸ್ ಐ ತಂತ್ರಗಾರಿಕೆ ರೂಪಿಸಿದೆ.