ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದ ಶಿರೋಮಣಿ ಅಕಾಲಿದಳ(ಎಸ್‌ಎಡಿ) ಪಕ್ಷವು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಜತೆ ನಿಲ್ಲುವುದಾಗಿ ತಿಳಿಸಿದೆ.
ಈ ಬಗ್ಗೆ ಎಸ್‌ಎಡಿ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದು, “ನಾವು ದ್ರೌಪದಿ ಮುರ್ಮು ಅವರಿಗೆ ಬೆಂಬಲಿಸುತ್ತೇವೆ. ಸಿಖ್ ಧರ್ಮದವರ ಮೇಲೆ ದೌರ್ಜನ್ಯವೆಸಗಿದ ಕಾಂಗ್ರೆಸ್ ಜತೆ ನಡೆಯುವುದಕ್ಕೆ ನಮಗೆ ಸಾಧ್ಯವಿಲ್ಲ’ ಎಂದಿದ್ದಾರೆ.
ರಾಗ ಬದಲಿಸಿದ ದೀದಿ:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಮಾತನಾಡಿದ್ದು, “ಆದಿವಾಸಿ ಮಹಿಳೆ ದ್ರೌಪದಿ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಮೊದಲೇ ನಮಗೆ ಹೇಳಿದ್ದರೆ, ನಾವೂ ಅವರಿಗೇ ಬೆಂಬಲಿಸುತ್ತಿದ್ದೆವು’ ಎಂದಿದ್ದಾರೆ. ಟಿಎಂಸಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು, ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.