ಅಜ್ಜಂಪುರ: ಸೊಲ್ಲಾಪುರದಲ್ಲಿ ಜ. 14 ಮತ್ತು 15ರಂದು ನಡೆಯಲಿರುವ ಗುರುಸಿದ್ಧರಾಮೇಶ್ವರ ಶಿವಯೋಗಿಗಳ ಜಯಂತ್ಯುತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸೊಲ್ಲಾಪುರಕ್ಕೆ ಶನಿವಾರ ಶಾಸಕ ಡಿ.ಎಸ್.ಸುರೇಶ್ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಶಂಭೈನೂರು ಆನಂದಪ್ಪ ಅವರು ಭೇಟಿ ನೀಡಿ ಸಭಾ ಮಂಟಪ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಅಲ್ಲದೇ, ಅಗತ್ಯವಿರುವ ಸೌಲಭ್ಯಗಳ ಕಲ್ಪಿಸಲು ಸ್ಥಳೀಯ ಮುಖಂಡರು ಹಾಗೂ ದೇವಾಲಯ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದರು.
ಜಯಂತ್ಯುತ್ಸವದ ಸಭಾ ಕಾರ್ಯಕ್ರಮ ನಡೆಸಲು ಸೊಲ್ಲಾಪುರ-ಚಿಕ್ಕನಲ್ಲೂರು ನಡುವಿನ ಕೃಷಿ ಭೂಮಿಯಲ್ಲಿ ವಿಶಾಲವಾದ ಪೆಂಡಾಲ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಸಭಾಂಗಣದ ವೇದಿಕೆ ನಿರ್ಮಾಣ ಹಂತದಲ್ಲಿದೆ. ವೇದಿಕೆ ಮುಂಭಾಗ ಅತಿಥಿಗಳು, ಮುಖಂಡರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 25 ಸಾವಿರ ಜನ ಕುಳಿತು ಕಾರ್ಯಕ್ರಮ ವೀಕ್ಷಿಸುವಷ್ಟು ಆಸನಗಳನ್ನು ಹಾಕಲಾಗುವುದು ಎಂದು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಅಕºರ್ ತಿಳಿಸಿದರು.
ಕಾರ್ಯಕ್ರಮ ನಡೆಯುವ ಸಮೀಪವೇ ಹತ್ತಾರು ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬಳಸುವ ನೀರಿಗೆ ಕೊರತೆ ಎದುರಾಗದಂತೆ ಹತ್ತಾರು ಟ್ಯಾಂಕ್‌ಗಳನ್ನು ಸಿದ್ಧಗೊಳಿಸಲಾಗಿದೆ. ಜನರಿಗೆ ಕುಡಿಯಲು ನೀರಿನ ವ್ಯವಸ್ತೆಗಾಗಿ ಶುದ್ಧ ನೀರಿನ ಪೌಚ್ ಹಾಗೂ ಬಾಟಲಿಗಳನ್ನೂ ಸಂಗ್ರಹಿಸಲಾಗಿದೆ. ಇನ್ನು ಸೊಲ್ಲಾಪುರದ ಗುರುಸಿದ್ಧರಾಮೇಶ್ವರ ದೇವಾಲಯಕ್ಕೆ ಬಣ್ಣದ ಲೇಪನ ಮಾಡಲಾಗಿದೆ. ತಮ್ಮಟದಹಳ್ಳಿ -ಸೊಲ್ಲಾಪುರ-ಚಿಕ್ಕನಲ್ಲೂರು ವರೆಗಿನ ರಸ್ತೆಯುದ್ದಕ್ಕೂ ಚಿಕ್ಕ-ಪುಟ್ಟ ಲೈಟ್ ಅಳವಡಿಸಲಾಗಿದೆ. ಗ್ರಾಮದ ವಿವಿಧ ದೇವಾಲಯ, ಗೋಪುರಗಳು, ಮುಖ್ಯ ದ್ವಾರ, ರಥ, ಕಲ್ಯಾಣಿಗಳಿಗೂ ಕಣ್ಮನ ಸೆಳೆಯುವಷ್ಟು ಬಲ್ಬ್ಗಳನ್ನು ಹಾಕಲಾಗಿದೆ.
ಸಭಾ ಮಂಟಪ ಸಮೀಪ ಹಸಿರಿನ ವಾತಾವರಣ ನಿರ್ಮಿಸಲು ಮತ್ತು ಧೂಳು ಆಗದಂತೆ ತಡೆಯಲು ಸುತ್ತಲಿನ ನಾಲ್ಕೈದು ಎಕರೆಯಷ್ಟು ಭೂಮಿಗೆ ರಾಗಿ ಬಿತ್ತನೆ ನಡೆಸಿದ್ದು, ತುಂತುರು ನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ. ಅಜ್ಜಂಪುರ – ಸೊಲ್ಲಾಪುರದುದ್ದಕ್ಕೂ ಜಯಂತ್ಯುತ್ಸವಕ್ಕೆ ಶುಭ ಕೋರುವ, ಜಯಂತ್ಯುತ್ಸವಕ್ಕೆ ಆಹ್ವಾನಿಸುವ ನೂರಾರು ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಸಾರ್ವಜನಿಕ ಸ್ಥಳಗಳು, ಮನೆಗಳು, ಅಂಗಡಿಗಳಲ್ಲಿಯೂ ಜಯಂತ್ಯುತ್ಸವದ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಆಟೋ, ಬಸ್‌ಗಳಿಗೂ ಜಯಂತ್ಯುತ್ಸವದ ಆಹ್ವಾನ ಪತ್ರಿಕೆಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಲಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಲಿಕ್ಯಾಪ್ಟರ್ ಬಂದಿಳಿಯಲು ಪಟ್ಟಣದ ಶೆಟ್ರಾ ಸಿದ್ಧಪ್ಪ ಪ.ಪೂ. ಕಾಲೇಜು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯಕ್ಕೆ ಪೊಲೀಸ್ ಇಲಾಖೆ ಉಸ್ತುವಾರಿ ವಹಿಸಿಕೊಂಡಿದೆ.
ಗುರುಸಿದ್ಧರಾಮೇಶ್ವರ ದೇವಾಲಯ ಸಮಿತಿ, ಗುರು ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ,
ಸೊಲ್ಲಾಪುರ ಮತ್ತು ಸುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.
14ರಂದು ಸ್ಥಳೀಯ ರಜೆ: ಸೊಲ್ಲಾಪುರದಲ್ಲಿ ಗುರು ಸಿದ್ಧರಾಮೇಶ್ವರರ ರಾಜ್ಯ ಮಟ್ಟದ ಜಯಂತಯುತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಜ.14 ರಂದು ಅಜ್ಜಂಪುರ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳೀಯ ರಜೆ ಘೋಷಿಸಿದ್ದಾರೆ.