ಅಜ್ಜಂಪುರ: ಅಜ್ಜಂಪುರ ಪಟ್ಟಣ ನೂತನ ತಾಲೂಕು ಕೇಂದ್ರವಾದ ಬಳಿಕವೂ ಇಲ್ಲಿನ ಗ್ರಂಥಾಲಯ ಸಾರ್ವಜನಿಕರಿಂದ ದೂರವಾಗಿದೆ. ನಾಮಫಲಕವೇ ಇಲ್ಲದ ಶಿಥಿಲ ಕಟ್ಟಡದೊಳಗೆ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ.
ಗ್ರಂಥಾಲಯ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಾರ್ವಜನಿಕ ಗ್ರಂಥಾಲಯ ತನ್ನ ಛಾಪನ್ನು ಕಳೆದುಕೊಂಡಿದೆ. ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ತಣಿಸುವ, ಕಥೆ-ಕವನಗಳ ಮೂಲಕ ವಿದ್ಯಾರ್ಥಿಗಳ ಯೋಚನಾ ಲಹರಿಯನ್ನು ಹೆಚ್ಚಿಸುವ, ದಿನಪತ್ರಿಕೆಗಳ ಮೂಲಕ ನಿತ್ಯದ ವಿದ್ಯಮಾನಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಸ್ಥಳವಾದ ಗ್ರಂಥಾಲಯ ಜನರ ಪಾಲಿಗೆ ಮರೀಚಿಕೆಯಾಗಿದೆ.
ಹಳೇ ಗ್ರಂಥಾಲಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಆ ಸಂದರ್ಭದಲ್ಲಿ ಕೈಲಾಸಂ ಕಲಾಕ್ಷೇತ್ರದ ಒಂದು ಕೊಠಡಿಯಲ್ಲಿ ಗ್ರಂಥಾಲಯ ನಡೆಸಲಾಗುತ್ತಿತ್ತು. ಈಗ ಹಳೇ ಗ್ರಂಥಾಲಯ ಕಟ್ಟಡದ ಪಕ್ಕದ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ಈ ಕಟ್ಟಡದ ಹೆಂಚುಗಳು ಹಾಳಾಗಿದ್ದು, ಅಲ್ಲಲ್ಲಿ ಸೋರುತ್ತಿದೆ. ಮಳೆ ನೀರು ಗ್ರಂಥಾಲಯವಿರುವ ಕೋಣೆಯೊಳಗೆ ಹರಿಯುತ್ತಿದೆ. ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು, ಯಾವಾಗಲಾದರೂ ಬೀಳುವ ಅಪಾಯದಲ್ಲಿದೆ. ಗ್ರಾಮ ಪಂಚಾಯಿತಿ ಬಸ್ ನಿಲ್ದಾಣದ ಪಕ್ಕದಲ್ಲಿನ 8000 ಚದರ ಅಡಿಗಳಷ್ಟು ನಿವೇಶನವನ್ನು ಗ್ರಂಥಾಲಯ ನಿರ್ಮಾಣಕ್ಕೆ ನೀಡಿದೆ. ಈ ಜಾಗದಲ್ಲಿ ಹಿಂದೆ ಖಾಸಗಿ ಶಾಲೆಯೊಂದು ನಡೆಯುತ್ತಿತ್ತು.
ಗ್ರಂಥಾಲಯ ಅಧಿಕಾರಿಗಳು ಪೊಲೀಸ್ ನೆರವು ಪಡೆದು, ಶಾಲೆಯನ್ನು ತೆರವುಗೊಳಿಸಿದರು. ಇದಾಗಿ ಒಂದೂವರೆ ವರ್ಷ ಕಳೆದರೂ ಗ್ರಂಥಾಲಯ ನಿರ್ಮಾಣ ಸಂಬಂಧ ಯಾವೊಬ್ಬ ಗ್ರಂಥಾಲಯಾಧಿಕಾರಿ ಇತ್ತ ತಲೆ ಹಾಕಿಲ್ಲ ಎಂದು ಮುಖಂಡ ಶಂಕರಪ್ಪ ದೂರಿದ್ದಾರೆ.
ನೂತನ ತಾಲೂಕು ಕೇಂದ್ರವಾಗಿರುವ ಅಜ್ಜಂಪುರಕ್ಕೆ ಗ್ರಂಥಾಲಯ ತುರ್ತು ಅವಶ್ಯವಿದೆ. ಅಧಿಕಾರಿಗಳು ಈಗಲಾದರೂ ನಿದ್ದೆಯಿಂದ ಹೊರಬರಬೇಕು. ಕೂಡಲೇ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲಿಯವರೆಗೂ ಯಾವುದಾದರೂ ವಿದ್ಯಾರ್ಥಿಗಳ ಕೊರತೆಯಿಂದ ಖಾಲಿಯಿರುವ ಶಾಲಾ ಕೊಠಡಿಯಲ್ಲಿ ನಡೆಸಬೇಕು. ಅಗತ್ಯ ಪುಸ್ತಕ-ದಿನಪತ್ರಿಕೆ ಪೂರೈಸಬೇಕು ಎಂದು ಖಾಸಗಿ ಶಾಲಾ ಶಿಕ್ಷಕಿ ಗೀತಾ ಆಗ್ರಹಿಸಿದ್ದಾರೆ.
ಗ್ರಂಥಾಲಯದ ಅ ಧಿಕಾರಿಗಳು, ಖಾಸಗಿ ಶಾಲೆ ತೆರವುಗೊಳಿಸುವಾಗ ತೋರಿದ ಉತ್ಸಾಹ ಹಾಗೂ ಆತುರವನ್ನು ಗ್ರಂಥಾಲಯ ಕಟ್ಟಡ ನಿರ್ಮಿಸುವಲ್ಲಿ ತೋರದಿರುವುದು ಬೇಸರ ಮೂಡಿಸಿದೆ. ಸೂಕ್ತ ನಿವೇಶನವಿದ್ದರೂ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿರುವುದು ಸಂಶಯ ಮೂಡಿಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೂಡಲೇ ಗ್ರಂಥಾಲಯ ನಿರ್ಮಾಣಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ ಒತ್ತಾಯಿಸಿದ್ದಾರೆ.