ಅಜ್ಜಂಪುರ: ಮನುಷ್ಯ ಜೀವನದಲ್ಲಿ ತಾಳ್ಮೆ, ಸಹನೆಯ ಗುಣಗಳನ್ನು ಸಂಪಾದಿಸಿಕೊಂಡು ಬಾಳಿದರೆ ಬದುಕು ಉಜ್ವಲಗೊಳ್ಳುತ್ತದೆ. ನೋವು ನುಂಗಿಕೊಂಡು ಸಮಾಜಕ್ಕೆ ನಲಿವು ತಂದುಕೊಟ್ಟ ಕೀರ್ತಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಬಗ್ಗವಳ್ಳಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದೇವಾಲಯದ ಶತಮಾನೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಲ್ಲಮ್ಮನ ಆದರ್ಶ ಪಾಲಿಸಿ: ದೇವರು ಮತ್ತು ಧರ್ಮದಲ್ಲಿ ಅಚಲ ನಿಷ್ಠೆಯಿಟ್ಟು ಮಲ್ಲಮ್ಮ ಬದುಕಿನ ಎಲ್ಲಾ ಸಮಸ್ಯೆ, ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಉನ್ನತಿ ಕಂಡದ್ದನ್ನು ಮರೆಯಲಾಗದು. ತಿಳಿವಳಿಕೆಯಿಲ್ಲದ ಪತಿ, ಕಿರುಕುಳ ಕೊಡುವ ಅತ್ತೆ, ಮಾವ, ಸದಾ ಚುಚ್ಚು ಮಾತನಾಡುವ ನಾದಿನಿಯರು, ದಾರಿ ತಪ್ಪಿದ ಮೈದುನ ಇವರೆಲ್ಲರ ಮಧ್ಯದಲ್ಲಿ ಬಾಳಿದ ಹೇಮರಡ್ಡಿ ಮಲ್ಲಮ್ಮ, ತನ್ನ ತಾಳ್ಮೆ ಗುಣಗಳಿಂದ ಗೆದ್ದು ಜಯಶೀಲರಾದರು. ಇಂದಿನ ಆಧುನಿಕ ಮಹಿಳಾ ಸಂಕುಲ ಮಲ್ಲಮ್ಮನವರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಬಾಳಿದರೆ ಸುಖೀ ಕುಟುಂಬ ಹೊಂದಲು ಸಾಧ್ಯವಾಗುತ್ತದೆ ಎಂದರು.
ಧರ್ಮ ಮಾರ್ಗದಲ್ಲಿ ನಡೆಯಿರಿ: ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಅಶಾಂತಿ ವಾತವರಣ ಹೆಚ್ಚಾಗುತ್ತಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಶಾಂತಿ, ಸಂಸ್ಕಾರದ ಗುಣಗಳು ಬೆಳೆಯಬೇಕು. ನಮ್ಮ ಮುಂದಿನ ಪೀಳಿಗೆಗೆ ಧರ್ಮದ ಬದುಕನ್ನುಕಟ್ಟಿಕೊಡುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಹೇಮರೆಡ್ಡಿ ಸಮಾಜದ ಬಗ್ಗವಳ್ಳಿ ಕೇಂದ್ರದ ಅಧ್ಯಕ್ಷ ಜಿ.ಬಿ.ಹೇಮಂತಕುಮಾರ್ ಮಾತನಾಡಿ, ನಮ್ಮ ಪೂರ್ವಿಕರ ಧಾರ್ಮಿಕ ಪರಂಪರೆಯನ್ನು ಮುಂದುವರೆಸುವ, ಹೊಸ ಪೀಳಿಗೆಯವರಲ್ಲಿ ನಮ್ಮ ನಂಬಿಕೆಯನ್ನು ಬಿತ್ತುವ ಮತ್ತು ಸಾಂಪ್ರದಾಯಿಕ ಆಚರಣೆಯ ಸೂಕ್ಷ್ಮತೆಯ ಅರಿವನ್ನು ಮೂಡಿಸುವ ಸಲುವಾಗಿ ಹೇಮರೆಡ್ಡಿ ಮಲ್ಲಮ್ಮ ದೇವಾಲಯದ ಶತಮಾನೋತ್ಸವ ಸಮಾರಂಭ ಆಚರಿಸಲಾಯಿತು ಎಂದರು. ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಅಭಿನವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಲಕ್ಷ್ಮೇಶ್ವರದ ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ, ಮಲ್ಲಮ್ಮನವರ ಜೀವನ-ಯಶಸ್ಸಿನ ಕುರಿತು ಉಪನ್ಯಾಸ ನೀಡಿದರು. ನಾರಣಾಪುರದ ಕೃಷಿ ತಜ್ಞ ಎಲ್.ಎಸ್.ಚಂದ್ರಶೇಖರ್ ಸಾವಯವ ಮತ್ತು ಸುಸ್ಥಿರ ಕೃಷಿ ಬಗ್ಗೆ ತಿಳಿಸಿದರು. ಗಣ್ಯರಿಗೆ ಸನ್ಮಾನ:.ಪಿ.ಷಡಾಕ್ಷರಿ, ಜಿ.ಪಿ.ಚಿಕ್ಕರಿಯಪ್ಪ, ಜಿ.ಗಿರಿಯಪ್ಪ, ಡಾ.ಬಿಂದುಶ್ರೀ, ಬಿ.ಎಸ್.ರಾಜು, ಡಾ.ಜಿ.ಎಚ್. ಶ್ರವಣ್, ಡಾ.ಜಿ.ಎಚ್.ಶಶಾಂಕ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಗೌರವ ಅಧ್ಯಕ್ಷ ಲಿಂಗೇಗೌಡ, ಕಾರ್ಯದರ್ಶಿ ಶಾಂತಕುಮಾರ್ ಮತ್ತು ಪದಾಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು. ಬಡಗನಾಡು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯಿತ ರೆಡ್ಡಿ ಸಮಾಜದ ಬಗ್ಗವಳ್ಳಿ ಕೇಂದ್ರ ಸಮಿತಿ ಕಾರ್ಯಕ್ರಮ ಆಯೋಜಿಸಿತ್ತು.