Advertisement

ಅಜ್ಜಂಪುರ ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆ

01:22 PM Aug 21, 2019 | Naveen |

ಎನ್‌.ಎಸ್‌.ಮಂಜುನಾಥ್‌
ಅಜ್ಜಂಪುರ:
ಅಜ್ಜಂಪುರ ರೈಲ್ವೆ ನಿಲ್ದಾಣ ಮೂಲ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ. ಇದರಿಂದ ರೈಲ್ವೆ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

Advertisement

ನಿಲ್ದಾಣದಲ್ಲಿ ಶೆಲ್ಟರ್‌ ಕೊರತೆಯಿದೆ. ನಿರ್ವಹಣೆ ಇಲ್ಲದೇ ಶೌಚಾಲಯ ಬಾಗಿಲು ಬಂದ್‌ ಆಗಿದೆ. ನಲ್ಲಿಗಳಿದ್ದರೂ ಪೈಪ್‌ ಹಾಳಾದ ಕಾರಣ ನೀರು ಸರಬರಾಜು ಆಗುತ್ತಿಲ್ಲ. ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಮುಳ್ಳಿನ ಪೊದೆಗಳು ತೆರವುಗೊಂಡಿಲ್ಲ. ಇವೆಲ್ಲವೂ ಪಟ್ಟಣದ ರೈಲ್ವೆ ನಿಲ್ದಾಣವನ್ನು ಬಳಸಿ ಸಾಗುವ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿವೆ.

ಅಜ್ಜಂಪುರ ತಾಲೂಕು ಕೇಂದ್ರವಾಗಿದೆ. ಎಕ್ಸ್‌ಪ್ರೆಸ್‌ ಸೇರಿದಂತೆ ಹತ್ತಾರು ರೈಲ್ವೆ ಗಾಡಿಗಳಿಗೆ ನಿಲ್ದಾಣದಲ್ಲಿ ನಿಲುಗಡೆ ಇದೆ. ಸುತ್ತಲಿನ ಕನಿಷ್ಟ 56 ಗ್ರಾಮಗಳ ಸಾವಿರಾರು ಪ್ರಯಾಣಿಕರು ನಿಲ್ದಾಣದಿಂದ ಇತರೆ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಕನಿಷ್ಟ 30 ಸಾವಿರದಿಂದ 1 ಲಕ್ಷದ ವರೆಗೆ ನಿತ್ಯ ಆದಾಯ ಬರುತ್ತದೆ. ಆದರೂ, ರೈಲ್ವೆ ನಿಲ್ದಾಣಕ್ಕೆಅಗತ್ಯ ಸೌಲಭ್ಯಕಲ್ಪಿಸದಿರುವುದು ದುರದೃಷ್ಟಕರ ಎಂದು ಸ್ಥಳೀಯರಾದ ಶಂಕರ್‌ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹತ್ತಾರು ವರ್ಷಗಳಿಂದ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಪ್ರಚಾರ ಭಾಷಣದಲ್ಲಿ ಎಲ್ಲಾ ಪಕ್ಷದವರೂ ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳಿಸುವ ಆಶ್ವಾಸನೆ ನೀಡುತ್ತ ಬಂದಿದ್ದಾರೆ. ಚುನಾವಣೆ ಬಳಿಕ ಅದರ ಕಡೆಗೆ ಗಮನ ಹರಿಸಲ್ಲ. ರೈಲ್ವೆ ನಿಲ್ದಾಣ ಅಭಿವೃದ್ಧಿ ಅಥವಾ ಎಕ್ಸ್‌ಪ್ರೆಸ್‌ ರೈಲ್ವೆ ನಿಲುಗಡೆಗೊಳಿಸುವ ಬಗ್ಗೆ ಚಕಾರ ಎತ್ತಲ್ಲ. ಇನ್ನು ಗೆಲುವು ಸಾಧಿಸಿದ ಶಾಸಕ-ಸಂಸದರನ್ನು, ಸ್ವಪಕ್ಷ ಅಥವಾ ವಿರೋಧ ಪಕ್ಷದ ಸ್ಥಳೀಯ ರಾಜಕೀಯ ಮುಖಂಡರು ಪ್ರಶ್ನಿಸುವ ಗೋಜಿಗೆ ಹೋಗಲ್ಲ. ಅದರಿಂದಾಗಿಯೇ ರೈಲ್ವೆ ನಿಲ್ದಾಣ ಇಂದಿಗೂ ಸೌಲಭ್ಯ ವಂಚಿತವಾಗಿಯೇ ಮುಂದುವರೆದಿದೆ ಎಂದು ಗಣೇಶ್‌ ದೂರಿದರು.

ಅಧಿಕ ಕಂದಾಯ ಸಂಗ್ರಹಿಸುತ್ತಿರುವ ಅಜ್ಜಂಪುರದ ನಿಲ್ದಾಣವನ್ನು ರೈಲ್ವೆ ಇಲಾಖೆ ನಿರ್ಲಕ್ಷಿಸಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಕ್ರಮ ಕೈಗೊಂಡಿಲ್ಲ. ಈಗಲಾದರೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ನಿಲ್ದಾಣದ ಸುಧಾರಣೆಗೆ ಕ್ರಮವಹಿಸಬೇಕೆಂದು ಸಿದ್ಧರಾಮಪ್ಪ ಆಗ್ರಹಿಸಿದ್ದಾರೆ.

Advertisement

ರಾಜಕೀಯದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಶೋಭಾ ಕರಂದ್ಲಾಜೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ಅಜ್ಜಂಪುರದಲ್ಲಿ ಮತ್ತಷ್ಟು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಲು ಮತ್ತು ನಿಲ್ದಾಣದ ಅಭಿವೃದ್ಧಿಗೊಳಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next