ಅಜೆಕಾರು: ನೀರೆ ಬೈಲೂರು ಗ್ರಾಮದ ನೀರೆ ಬಡಗ ಗುತ್ತು ಬಳಿಯ ಭತ್ತದ ಗದ್ದೆಯಲ್ಲಿ ಸುಮಾರು 20 ಅಡಿ ಆಳದಷ್ಟು ಗೋಚರಿಸುವ ಬಾವಿ ಯಾಕಾರದ ಗುಹೆ ಕಂಡು ಬಂದಿದೆ.
ನೀರೆ ಶೇಖರ ಶೆಟ್ಟಿ ಎಂಬವರ ಗದ್ದೆಯಲ್ಲಿ ಬೆಳೆದ ಭತ್ತದ ಪೈರು ಯಂತ್ರದ ಮೂಲಕ ಕಟಾವು ಮಾಡುವ ಸಂದರ್ಭ ಈ ಗುಹೆ ಪತ್ತೆಯಾಗಿದೆ.
ಶತಮಾನಗಳಿಂದ ಈ ಗದ್ದೆಯಲ್ಲಿ ಭತ್ತದ ನಾಟಿ ನಡೆಯುತ್ತಿದ್ದು ಈ ವರೆಗೆ ಇಂತಹ ಗುಹೆಯಾಗಲಿ, ಭೂ ಕುಸಿತವಾಗಲಿ ಕಂಡುಬಂದಿಲ್ಲ.
ಕಳೆದ ಜೂನ್ ತಿಂಗಳಿನಲ್ಲಿ ಯಂತ್ರದ ಮೂಲಕ ಗದ್ದೆ ಹದ ಮಾಡುವಾಗಲು ಯಾವುದೇ ಭೂ ಕುಸಿತ ಕಂಡು ಬಂದಿಲ್ಲ. ಆದರೆ ಈಗ 4 ತಿಂಗಳ ಬಳಿಕ ಕಟಾವು ಮಾಡುವ ಸಂದರ್ಭ ಗುಹೆ ಕಂಡುಬಂದಿದೆ.
ಭೂ ಕುಸಿತ ವಾದ ಪ್ರದೇಶದಲ್ಲಿ ಯಾವುದೇ ರೀತಿಯ ಚಪ್ಪಡಿಕಲ್ಲು ಗಳಂತಹ ಕುರುಹುಗಳು ಪತ್ತೆಯಾಗಿಲ್ಲ.
ಹಲವು ಶತಮಾನಗಳ ಹಿಂದೆ ಈ ಪ್ರದೇಶದಲ್ಲಿ ಜೈನರು, ಲಿಂಗಾಯಿತರು ವಾಸ ಮಾಡುತ್ತಿದ್ದು ಅಂದಿನ ಕಾಲದ ಯಾವುದಾದರು ಗುಹೆ ಅಥವ ಸುರಂಗ ಮಾರ್ಗ ಇರಬಹುದೆ ಎಂಬ ಬಗ್ಗೆ ಇತಿಹಾಸಕಾರರು ಸಂಶೋಧನೆ ಮಾಡುವ ಅಗತ್ಯ ಇದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.