Advertisement

Ajekar: ನೀರೆ ಪಂಚಾಯತ್‌ ವಿನೂತನ ಕ್ರಮದಿಂದ ಜಂಗುಳಿ ಪ್ರದೇಶ ಬದಲಾದ ಕತೆ

01:15 PM Sep 30, 2024 | Team Udayavani |

ಅಜೆಕಾರು: ನೀರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಡ್ಡೆಯಂಗಡಿ ಬಳಿಯ ನೀರೆ ಜಂಗುಳಿ ಪ್ರದೇಶ ವರ್ಷಗಳ ಹಿಂದೆ ತ್ಯಾಜ್ಯಗಳ ಕೊಂಪೆಯಾಗಿ ಮಾರ್ಪಾಡಾಗಿತ್ತು. ಆದರೆ ಪಂಚಾಯತ್‌ನ ವಿನೂತನ ಕ್ರಮದಿಂದ ಅದು ಆಕರ್ಷಕ ಸೆಲ್ಫಿ ಕಾರ್ನರ್‌ ಆಗಿ ಬದಲಾಗಿದೆ!

Advertisement

ನೀರೆ ಪಂಚಾಯತ್‌ ಆಡಳಿತವು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಸ, ತ್ಯಾಜ್ಯ ಬೀಳದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ. ಬೇಕಾಬಿಟ್ಟಿ ಕಸ ಎಸೆಯುವವರ ಮೇಲೆ ಕಠಿನ ಕ್ರಮ ಕೈಗೊಂಡು ದಂಡ ಹಾಕುವ ಕ್ರಮವನ್ನು ಈಗಾಗಲೇ ಮಾಡಿ ತೋರಿಸಿದೆ.
ಈ ನಡುವೆ, ಕಾರ್ಕಳ-ಉಡುಪಿ ಮುಖ್ಯ ರಸ್ತೆಯ ನೀರೆ ಜಂಗುಳಿ ಎಂಬ ಜನ ವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ ಅಪರಿಚಿತರು ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದರು. ಇದು ಪಂಚಾಯತ್‌ ಆಡಳಿತಕ್ಕೆ ಸಮಸ್ಯೆ ತಂದೊಟ್ಟಿತ್ತು. ಕಸ ಎಸೆಯುತ್ತಿದ್ದ ಜಾಗದಲ್ಲಿ ಹಲವು ಬಾರಿ ಎಚ್ಚರಿಕೆಯ ಫ‌ಲಕ ಅಳವಡಿಸಿದ್ದರು ಪ್ರಯೋಜನಕ್ಕೆ ಬಂದಿರಲಿಲ್ಲ.

ಅದು ಬ್ಲ್ಯಾಕ್‌ಸ್ಪಾಟ್‌ ಆಗಿತ್ತು
ಈ ಜಂಗುಳಿ ಪ್ರದೇಶ ಎಷ್ಟೊಂದು ಅಪಖ್ಯಾತಿಗೆ ಗುರಿಯಾಗಿತ್ತು ಎಂದರೆ ಉಡುಪಿ ಜಿಲ್ಲೆಯ ಪ್ರಮುಖ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು. ಸುಮಾರು 3 ಕಿ.ಮೀ. ಯಷ್ಟು ರಸ್ತೆಯು ಅರಣ್ಯ ಆವೃತವಾಗಿರುವುದು ಕಸ ಎಸೆಯುವುವವರಿಗೆ ಅನುಕೂಲವಾಗಿತ್ತು.

ಯಾವುದೇ ಮನೆ, ಜನವಸತಿ ಇಲ್ಲದ ಕಾರಣ ಸಾರ್ವಜನಿಕರು, ಪ್ರವಾಸಿಗರು ಗೋಣಿಗಳಲ್ಲಿ ಕಸವನ್ನು ತುಂಬಿಸಿ ಈ ಪ್ರದೇಶದಲ್ಲಿ ಎಸೆದು ಹೋಗುತ್ತಿದ್ದರು.

Advertisement

ಮಾಡಿದ ಬದಲಾವಣೆ ಏನು?
ನೀರೆ ಗ್ರಾಮ ಪಂಚಾಯತ್‌ ಈ ಸವಾಲನ್ನು ಧನಾತ್ಮಕವಾಗಿ ಸ್ವೀಕರಿಸಿತು. ಇದೊಂದು ಅತ್ಯಂತ ಸುಂದರ ಪ್ರಕೃತಿ ರಮ್ಯ ಪ್ರದೇಶವಾಗಿದೆ. ಅಲ್ಲಿ ನಿಂತರೆ ಪ್ರಕೃತಿ ಸೊಗಸಾಗಿ ಕಾಣುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಸ ಎಸೆಯುವ ಜಾಗವನ್ನೇ ಪ್ರಕೃತಿ ವೀಕ್ಷಣ ಜಾಗವಾಗಿ ಮಾರ್ಪಡಿಸಿದೆ. ಇಲ್ಲಿನ ಪ್ರದೇಶವನ್ನು ಸ್ವತ್ಛಗೊಳಿಸಿದ್ದಲ್ಲದೆ ಕುಳಿತುಕೊಳ್ಳಲು ಬೆಂಚ್‌ಗಳನ್ನು ಅಳವಡಿಸಲಾಗಿದೆ ಹಾಗೂ ಸೆಲ್ಫಿ ಕಾರ್ನರ್‌ ನಿರ್ಮಿಸಿ ಪ್ರಕೃತಿ ನಡುವೆ ಫೋಟೊ ತೆಗೆಸಿಕೊಳ್ಳಲು ಅವಕಾಶವಾಗಿದೆ. ಹೀಗೆ ಮಾಡಿದ ಬಳಿಕ ಅಲ್ಲಿ ಕಸ ಎಸೆಯುವುದು ನಿಂತಿದೆ. ಮಾತ್ರವಲ್ಲ, ಪ್ರವಾಸಿಗರು ಕೂಡಾ ಅಲ್ಲಿ ನಿಂತು ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ.

ಸೆಲ್ಫಿ ಕಾರ್ನರ್‌ ಯೋಜನೆಗೆ ಸಾಹಸ್‌ ಸಂಸ್ಥೆ ಕೈ ಜೋಡಿಸಿದೆ. ನೀರೆ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಪರಿಕಲ್ಪನೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವತ್ಛತೆ ಕಾಪಾಡುವಲ್ಲಿ ಯಶಸ್ವಿ
ಗ್ರಾಮಸ್ಥರ ಸಹಕಾರದಿಂದ ಸ್ವತ್ಛತೆ ಕಾಪಾಡುವಲ್ಲಿ ಪಂಚಾಯತ್‌ ಯಶಸ್ವಿಯಾಗಿದೆ, ಗಾಂಧಿ ಗ್ರಾಮ ಪುರಸ್ಕಾರವೂ ಬಂದಿದೆ. ಆದರೆ ಹೊರ ಪ್ರದೇಶದ ಅಪರಿಚಿತರು ಪಂಚಾಯತ್‌ ವ್ಯಾಪ್ತಿಯಲ್ಲಿ ಕಸ ಎಸೆಯುವ ಸಮಸ್ಯೆ ಉಂಟಾಗಿತ್ತು. ಈ ನಿಟ್ಟಿನಲ್ಲಿ ಕೊಳಚೆ ಪ್ರದೇಶ ಸ್ವತ್ಛಗೊಳಿಸಿ ಪ್ರಯಾಣಿಕರ ಸೆಲ್ಪಿ ಕಾರ್ನರ್‌ ಆಗಿ ಆಗಿ ಬದಲಾಯಿಸಲಾಗಿದೆ.
-ಅಂಕಿತಾ ನಾಯಕ್‌, ಪಿಡಿಒ ನೀರೆ ಗ್ರಾ.ಪಂ.

ಗ್ರಾಮ ಕಸ ರಹಿತವಾಗಿದೆ
ಪಂಚಾಯತ್‌ ಸದಸ್ಯರು, ಪಿಡಿಒ, ಸಿಬಂದಿಯವರ ಸಹಕಾರದಿಂದ ಗ್ರಾಮ ಕಸ ರಹಿತವಾಗಿದೆ. ಹಿಂದೆ ಕಸ ಎಸೆಯುತ್ತಿದ್ದ ಜಾಗ ಈಗ ವಿನೂತನ ರೀತಿಯಲ್ಲಿ ಗಮನ ಸೆಳೆಯುತ್ತಿದೆ.
-ಸಚ್ಚಿದಾನಂದ ಪ್ರಭು, ಅಧ್ಯಕ್ಷರು, ನೀರೆ ಗ್ರಾ.ಪಂ.

-ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next