Advertisement

Ajekar: ಕೊಲೆ ಪ್ರಕರಣದ ಆರೋಪಿ ಖುಲಾಸೆ

12:20 AM Nov 21, 2023 | Team Udayavani |

ಕಾರ್ಕಳ: ಕಾರ್ಕಳ ತಾಲೂಕು ಅಜೆಕಾರು ಹಾಡಿಯಂಗಡಿಯಲ್ಲಿ 2021ನೇ ಇಸವಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಹರೀಶ ಶೇರ್ವೇಗಾರ (28) ಅವರನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಸಂಚಾರಿ ಪೀಠ) ನ್ಯಾಯಾಧೀಶ ದಿನೇಶ್‌ ಹೆಗ್ಡೆ ಅವರು ಆರೋಪಿತನ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕೂಷನ್‌ ವಿಫ‌ಲವಾಗಿ ಎಂದು ಹೇಳಿ ಖುಲಾಸೆಗೊಳಿಸಿದ್ದಾರೆ.

Advertisement

ಒಂಟಿಯಾಗಿ ವಾಸ
2021ರ ಇಸವಿ ಮೇ 19ರ ರಾತ್ರಿ ಒಂಟಿಯಾಗಿ ವಾಸವಿದ್ದ ಮನೆಯ ವರಾಂಡದಲ್ಲಿ ಆನಂದ ಶೇರ್ವೇಗಾರ (63) ಅವರ ಶವ ಪತ್ತೆಯಾಗಿತ್ತು. ಅಂದು ಕೊಲೆ ಶಂಕೆ ವ್ಯಕ್ತಗೊಂಡಿತ್ತು. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂದ ಶೇರ್ವೇಗಾರ್‌ ಅವರು ತನ್ನ ನಾಲ್ಕು ಎಕರೆ ಜಮೀನನ್ನು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಗಣೇಶ್‌ ರಾವ್‌ ಮತ್ತು ಇತರ ಇಬ್ಬರಿಗೆ ಮಾರಾಟ ಮಾಡಿದ್ದರು. ಪತ್ನಿ ಮತ್ತು ಮಕ್ಕಳಿಂದ ಬೇರ್ಪಟ್ಟು ಪೂರ್ವಿಕರ ಮನೆಯಿಂದ 100 ಮೀ. ದೂರದಲ್ಲಿ ಸಣ್ಣ ಮನೆ ನಿರ್ಮಿಸಿಕೊಳ್ಳಲು ಜಮೀನು ಖರೀದಿಸಿದವರಿಂದ ಅನುಮತಿ ಪಡೆದು ಅಲ್ಲಿ ಒಂಟಿಯಾಗಿ ವಾಸವಿದ್ದರು.

ಸಂಬಂಧಿಕ ಹರೀಶ್‌ ಶೇರ್ವೇಗಾರ ಮನೆ ಕೆಲಸಕ್ಕಾಗಿ ಆನಂದ ಅವರ ಮನೆಗೆ ದಿನನಿತ್ಯ ಬರುತಿದ್ದರು. ಆನಂದ್‌ ಸಾವನಪ್ಪಿದ ದಿನ ಹರೀಶ್‌ ಕೆಲಸ ಮುಗಿಸಿ ಹೊರ ಹೋಗಿದ್ದರು. ತಡರಾತ್ರಿ ವಾಪಸ್‌ ಬಂದಿದ್ದರು. ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆನಂದ್‌ ಸಾವಿಗೆ ಹರೀಶ್‌ ಕಾರಣವಾಗಿರಬಹುದು ಎಂದು ತನಿಖಾಧಿಕಾರಿಯವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ. ಆರೋಪಿ ಪರ ಕಾರ್ಕಳದ ನ್ಯಾಯವಾದಿ ಮುಕ್ತಾ ನಿತ್ಯಾನಂದ ಶೆಣೈ ವಾದಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next