Advertisement

ಅಜಂಪುರ ತಾಲೂಕು ಕಚೇರಿ ಉದ್ಘಾಟನೆ

12:59 PM Dec 19, 2019 | Naveen |

ಅಜ್ಜಂಪುರ: ಪಟ್ಟಣದಲ್ಲಿ ತಾಲೂಕು ಕಚೇರಿ ಮತ್ತು ತಾಲೂಕು ಪಂಚಾಯಿತಿ ಕಾರ್ಯಾಲಯಗಳನ್ನು ಆರಂಭಗೊಳಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಹಂತ-ಹಂತವಾಗಿ ಕಾರ್ಯಾರಂಭ ಮಾಡಲಿವೆ ಎಂದು ಶಾಸಕ ಡಿ.ಎಸ್‌. ಸುರೇಶ್‌ ಹೇಳಿದರು.

Advertisement

ಪಟ್ಟಣದಲ್ಲಿ ಬುಧವಾರ ತಾಲೂಕು ಪಂಚಾಯಿತಿ ಕಾರ್ಯಾಲಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಮಿನಿ ವಿಧಾನಸೌಧ ಸೇರಿದಂತೆ ಹಲವು ಕಟ್ಟಡ ನಿರ್ಮಾಣಕ್ಕೆ ಅಜ್ಜಂಪುರದ ಅಮೃತ್‌ ಮಹಲ್‌ ಮತ್ತು ಗೌರಾಪುರ ಗ್ರಾಮದಲ್ಲಿ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ.

ಸರ್ಕಾರದ ಅನುಮೋದನೆ ಬಳಿಕ ನಿರ್ಧಿಷ್ಠ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ರಾಗಿಬಸವನಹಳ್ಳಿಯಲ್ಲಿ ಅರಣ್ಯ ಇಲಾಖೆಯಿಂದ ಎದುರಾಗಿದ್ದ ಸಮಸ್ಯೆ ಬಗೆಹರಿದಿದ್ದು, ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ 100 ಮೀ. ಉದ್ದದ ಪೈಪ್‌ಲೈನ್‌ ಅಳವಡಿಕೆ ಮತ್ತು ರೈಲ್ವೆ ಇಲಾಖೆಯ ಜಾಗದಲ್ಲಿನ ಕಾಮಗಾರಿಗೆ ಅನುಮತಿ ಬಾಕಿಯಿದೆ. ಇಲಾಖೆಗಳು ಅನುಮೋಧನೆ ನೀಡಿದ ತಕ್ಷಣ ಉಳಿದ ಕಾಮಗಾರಿ ಪೂರ್ಣಗೊಳಿಸಿ, ಅಜ್ಜಂಪುರ ಸೇರಿದಂತೆ ಹಲವು ಗ್ರಾಮಗಳಿಗೆ ಭದ್ರಾದಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್‌ ಚೌವ್ಹಾಣ್‌ ಕುಡಿಯುವ ನೀರು ಪೂರೈಕೆಗೆ ಬಹುಗ್ರಾಮ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು. ಮುಖಂಡ ಜಿ.ನಟರಾಜ್‌ ಮಾತನಾಡಿ, ಅಜ್ಜಂಪುರದ ಅಮೃತ್‌ ಮಹಲ್‌ನಲ್ಲಿಯೇ ಮಿನಿ ವಿಧಾನಸೌಧ ನಿರ್ಮಿಸಬೇಕೆಂದು ಆಗ್ರಹಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಮ್ಮ ನಟರಾಜ್‌, ತರೀಕೆರೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್‌, ಕಡೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸಮ್ಮ, ಉಪಾಧ್ಯಕ್ಷೆ ಸುನಂದಮ್ಮ, ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಮುಖಂಡ ಮಧುಸೂದನ್‌ ಮತ್ತಿತರರು ಹಾಜರಿದ್ದರು.

ಅಜ್ಜಂಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣ ಪಂಚಾಯಿತಿಗೆ ಶೀಘ್ರ ಆಡಳಿತಾಧಿಕಾರಿ ನೇಮಿಸುವ ಸಾಧ್ಯತೆ ಇದೆ. ಅಜ್ಜಂಪುರದಲ್ಲಿನ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಇಲಾಖೆ ಮಟ್ಟದಲ್ಲಿ ಚರ್ಚೆಯಾಗಿದ್ದು, ಶೀಘ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ.
ಡಿ.ಎಸ್‌.ಸುರೇಶ್‌, ಶಾಸಕರು

ಅಜ್ಜಂಪುರ ತಾಲೂಕು ಪಂಚಾಯಿತಿ ವ್ಯಾಪ್ತಿಗೆ 136 ಹಳ್ಳಿಗಳು, 26 ಗ್ರಾಮ ಪಂಚಾಯಿತಿಗಳು ಒಳಪಡಲಿವೆ. ಸಾರ್ವಜನಿಕರು ತಮ್ಮ ಇಲಾಖಾ ಕೆಲಸಗಳಿಗೆ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಬಹುದಾಗಿದೆ.
ರಾಮಕುಮಾರ್‌, ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next