Advertisement

ಏರ್‌ಶೋ ವೇಳೆ ಕಾರ್‌ಕಿಚ್ಚು :  300ಕ್ಕೂ ಅಧಿಕ ಕಾರು ಭಸ್ಮ

12:33 AM Feb 24, 2019 | |

ಬೆಂಗಳೂರು: ಯಲಹಂಕದ ವಾಯುಸೇನಾ ನೆಲೆಯಲ್ಲಿ  ಶನಿವಾರ ಒಂದು ಕಡೆ ಲೋಹದ ಹಕ್ಕಿಗಳು  ಚಮತ್ಕಾರ ನಡೆಸುತ್ತಿದ್ದ ಸಂದರ್ಭದಲ್ಲೇ  ಆವರಣದ ಇನ್ನೊಂದು ಬದಿಯಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 300ಕ್ಕೂ ಅಧಿಕ ಕಾರುಗಳು ಸುಟ್ಟು ಕರಕಲಾಗಿವೆ.  ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಕ್ಷಣಮಾತ್ರದಲ್ಲಿ  ಆಕಾಶವೇ ಕಾಣದಷ್ಟು ದಟ್ಟ ಹೊಗೆ ಆವರಿಸಿಕೊಂಡು, ಏರೋ ಇಂಡಿಯಾ ವೀಕ್ಷಿಸಲು ಬಂದಿದ್ದ ಸಾರ್ವಜನಿಕರ ಕಾರುಗಳು ಮತ್ತು ಇತರ ವಾಹನಗಳು ಸುಟ್ಟುಹೋಗಿವೆ.ಅದೃಷ್ಟವಶಾತ್‌ ದುರ್ಘ‌ಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. 

Advertisement

 ಏರ್‌ ಶೋ ಆರಂಭದಲ್ಲಿ ಸೂರ್ಯಕಿರಣ್‌ ದುರಂತದಲ್ಲಿ ಓರ್ವ ಪೈಲಟ್‌ ಸಾವಿಗೀಡಾಗಿ ಇನ್ನಿಬ್ಬರು ಗಾಯಗೊಂಡಿದ್ದರು. ಆ ನೆನಪು ಹಸಿರಾಗಿರುವಾಗಲೇ ಈ ಘಟನೆ ನಡೆದಿದೆ.  ಮಧ್ಯಾಹ್ನ 12 ಗಂಟೆಯಿಂದ 12.10ರ ಸುಮಾರಿಗೆ ಆಕಾಶಕ್ಕೆ ಏರುತ್ತಿದ್ದ ಹೊಗೆ ಯಲಹಂಕ ಪರಿಸರವನ್ನೇ ಬೆಚ್ಚಿಬೀಳಿಸಿತ್ತು. ಗೇಟ್‌ ನಂ. 5ರ ಎದುರಿನ ಪಾರ್ಕಿಂಗ್‌ ಪ್ರದೇಶವು ದಟ್ಟವಾದ ಒಣಹುಲ್ಲುಗಳಿಂದ ಕೂಡಿತ್ತು. ಏರ್‌ ಶೋಗೆ ಬರುವವರಿಗಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತೇ ವಿನಾ ಯಾವುದೇ ರೀತಿಯ ಭದ್ರತಾ ಸಿಬಂದಿಯ ನಿಯೋಜನೆ ಮಾಡಿರಲಿಲ್ಲ. ಬಿಸಿಲಿನ ತಾಪವೂ ಹೆಚ್ಚಿರುವುದರಿಂದ ಮತ್ತು ಕಾರಿನ ಎಂಜಿನ್‌ಗಳು ಬಿಸಿಯಾಗಿದ್ದರಿಂದ ಹುಲ್ಲಿಗೆ ಬೆಂಕಿ ತಾಗಿ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಬೆಂಕಿ ಅವಘಡಕ್ಕೆ ನಿಜವಾದ ಕಾರಣ ತನಿಖೆಯಿಂದ ಗೊತ್ತಾಗಬೇಕಿದೆ.

ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಒಂದು ಅಗ್ನಿಶಾಮಕ ವಾಹನ ನೇರವಾಗಿ ಸ್ಥಳಕ್ಕೆ ಹೋಗಿತ್ತು. ಬಳಿಕ 20ರಿಂದ 25 ವಾಹನ ಮತ್ತು ಫೈರ್‌ ಎಂಜಿನ್‌ ವಾಹನಗಳ ಸಿಬಂದಿಗಳು  2 ಗಂಟೆಗಳಿಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು  ಆರಿಸಿದರು.
ಒಣಗಿದ ಹುಲ್ಲು, ಬಿಸಿಯಾಗಿದ್ದ ಕಾರಿನ ಎಂಜಿನ್‌, ಪೆಟ್ರೋಲ್‌, ಡೀಸೆಲ್‌ ಟ್ಯಾಂಕ್‌ ಇದೆಲ್ಲವೋ ಒಟ್ಟಾಗಿದ್ದರಿಂದ ಬೆಂಕಿಯ ತೀವ್ರತೆ ಊಹಿಸಿಕೊಳ್ಳಲು ಸಾಧ್ಯವಾಗದಷ್ಟಿತ್ತು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದರು.

ವಿಮಾ ಹಕ್ಕು  ಪತ್ರ ಪರಿಶೀಲನೆಗೆ ವಿಶೇಷ ತಂಡ
ದುರಂತದಲ್ಲಿ ಕಾರು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರಕಾರ ಒಟ್ಟಾಗಿ ಕೆಲವೊಂದು ಕ್ರಮ ತೆಗೆದುಕೊಂಡಿವೆ. ವಾಹನಗಳಿಗೆ ಸಂಬಂಧಪಟ್ಟ ವಿಮಾ ಹಕ್ಕು ಗಳನ್ನು ಪರಿಶೀಲಿಸಲು ಒಂದು ವಿಶೇಷ ತಂಡ ರಚಿಸಲಾಗಿದೆ. ಹಾನಿಗೊಳಗಾದ ವಾಹನಗಳಿಗೆ ನಕಲು ನೋಂದಣಿ ಪ್ರಮಾಣ ಪತ್ರ (ಆರ್‌.ಸಿ) ಮತ್ತು ಚಾಲನಾ ಪರವಾನಿಗೆ ಗಳನ್ನು ನೀಡಲು ಸಾರಿಗೆ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಿದ್ದೇವೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ವಾಹನಗಳ ವಿಮಾ ಹಕ್ಕು ಗಳನ್ನು ಸಹಾನುಭೂತಿ ದೃಷ್ಟಿಕೋನದಿಂದ ಪರಿಹರಿಸಿಕೊಡಲು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ತಿಳಿಸಿದರು.

ದುರಂತದಲ್ಲಿ  ಕಾರು ಕಳೆದು ಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಒಟ್ಟಾಗಿ ಕೆಲವೊಂದು ಕ್ರಮಗಳನ್ನು ತೆಗೆದುಕೊಂಡಿವೆೆ. ವಾಹನಗಳಿಗೆ ಸಂಬಂಧಪಟ್ಟ ವಿಮಾ ಹಕ್ಕುಗಳನ್ನು ಪರಿಶೀಲಿ ಸಲು ಒಂದು ವಿಶೇಷ ತಂಡ ರಚಿಸಲಾಗಿದೆ. 
l ಟಿ.ಎಂ.ವಿಜಯ ಭಾಸ್ಕರ್‌, ಮುಖ್ಯ ಕಾರ್ಯದರ್ಶಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next