ನವದೆಹಲಿ: 2ಜಿ ತರಂಗಾಂತರ ಹಂಚಿಕೆಯ ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಹಾಗೂ ಇವರ ಸೋದರ ಕಲಾನಿಧಿ ಮಾರನ್ ವಿರುದ್ಧದ ಎಲ್ಲಾ ಆರೋಪದಿಂದ ಸಿಬಿಐ ವಿಶೇಷ ಕೋರ್ಟ್ ಆರೋಪ ಮುಕ್ತಗೊಳಿಸಿದೆ.
ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಸೇರಿ 8 ಮಂದಿ ಆರೋಪಿಗಳೆಂದು ಹೆಸರಿಸಲಾಗಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮಾರನ್ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪ್ರಕರಣ ಮುಂದುವರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಹಾಗಾಗಿ ಆರೋಪಿಗಳ ಪ್ರಕರಣ ಮುಂದುವರಿಕೆ ಅಸಾಧ್ಯ ಎಂದು ವಿಶೇಷ ನ್ಯಾಯಾಧೀಶ ಓಪಿ ಸೈನಿ ತೀರ್ಪು ನೀಡಿದ್ದಾರೆ.
ಮಲೇಷ್ಯಾದ ಮ್ಯಾಕ್ಸಿಸ್ ಗ್ರೂಪ್‌ಗೆ ಕಂಪನಿ ಮಾರಾಟ ಮಾಡುವಂತೆ ಏರ್‌ಸೆಲ್ ಮಾಲೀಕರಿಗೆ 2006ರಲ್ಲಿ ದೂರಸಂಪರ್ಕ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಒತ್ತಡ ಹೇರಿದ್ದರು. ಇದಕ್ಕೆ ಪ್ರತಿಯಾಗಿ ಮಾರನ್ ಅವರಿಗೆ ಸುಮಾರು 700 ಕೋಟಿ ರೂ.ನಷ್ಟು ಲಂಚ ಸಂದಾಯವಾಗಿತ್ತು. ಈ ಪೈಕಿ ಒಂದಿಷ್ಟು ಹಣವನ್ನು ತಮ್ಮ ಸೋದರ ಕಲಾನಿಧಿ ಒಡೆತನದಲ್ಲಿರುವ ಸನ್ ಸಮೂಹ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಈ ಎಲ್ಲ ಹಣವನ್ನೂ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.
ಈ ಪೈಕಿ ದಯಾನಿಧಿ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ಇಡಲಾಗಿದ್ದ 100 ಕೋಟಿ ರೂ. ನಿಶ್ಚಿತ ಠೇವಣಿಯನ್ನೂ ಜಪ್ತಿ ಮಾಡಲಾಗಿತ್ತು.