Advertisement

2019ರಿಂದ ಎಲ್ಲ  ಕಾರುಗಳಲ್ಲಿ  ಏರ್‌ಬ್ಯಾಗ್‌ ಕಡ್ಡಾಯ

06:00 AM Oct 30, 2017 | Harsha Rao |

ಹೊಸದಿಲ್ಲಿ: ಹೊಸತಾಗಿ ಮಾರುಕಟ್ಟೆಗೆ ಬರುವ ಎಲ್ಲ ಮಾದರಿಯ ಕಾರುಗಳಲ್ಲೂ ಏರ್‌ಬ್ಯಾಗ್‌, ಸೀಟ್‌ಬೆಲ್ಟ್ ರಿಮೈಂಡರ್‌, ಕಾರು 80 ಕಿ.ಮೀ. ವೇಗದ ಮಿತಿ ದಾಟಿದರೆ ಅಲರಾಂ ವ್ಯವಸ್ಥೆ ಕಡ್ಡಾಯ. ರಿವರ್ಸ್‌ ಪಾರ್ಕಿಂಗ್‌, ಸೆಂಟ್ರಲ್‌ ಲಾಕಿಂಗ್‌ ಸಿಸ್ಟಮ್‌ ಕೂಡ ಇರಲೇಬೇಕು. 2019ರ ಜು.1ರಿಂದ ಈ ನಿಯಮ ಜಾರಿಯಾಗಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಹೊಸ ನಿಯಮ, ಅನುಷ್ಠಾನ ದಿನಾಂಕವನ್ನು ಅನುಮೋದಿಸಿದ್ದು, ಶೀಘ್ರದಲ್ಲಿಯೇ ಅದನ್ನು ಅಧಿಕೃತವಾಗಿ ಪ್ರಕಟಿಸಲಿದೆ.

Advertisement

ಸದ್ಯ ಏರ್‌ಬ್ಯಾಗ್‌, ವೇಗದ ಮಿತಿ ದಾಟಿದರೆ ಮಾಹಿತಿ ನೀಡುವ, ಇತರ ಅತ್ಯಾಧುನಿಕ ವ್ಯವಸ್ಥೆಗಳು ಹೈ ಎಂಡ್‌ ಮತ್ತು ಲಕ್ಸುರಿ ಕಾರುಗಳಲ್ಲಿ ಮಾತ್ರವೇ ಇದೆ. ಹೊಸ ಮಾದರಿಯ ಕಾರುಗಳಲ್ಲಿ ವೇಗದ ಮಿತಿ 80 ಕಿ.ಮೀ. ದಾಟಿದ ಕೂಡಲೇ ಧ್ವನಿಯ ಮೂಲಕ ಚಾಲಕನಿಗೆ ಅಲರ್ಟ್‌ ಮಾಡುತ್ತದೆ. 100 ಕಿ.ಮೀ. ದಾಟಿದ ಕೂಡಲೇ ಅದು ಮತ್ತಷ್ಟು ಚುರುಕಾಗಿ ಮಾಹಿತಿ ನೀಡುತ್ತದೆ. 120 ಕಿ.ಮೀ. ವೇಗಕ್ಕೆ ತಲುಪಿದ ಕೂಡಲೇ ಬಿಡದೆ ಅಲರ್ಟ್‌ ಮಾಡಿ ಚಾಲಕನಿಗೆ ನೆನಪು ಮಾಡುತ್ತದೆ ಎಂದು ರಸ್ತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. 

ರಿವರ್ಸ್‌ ಸೆನ್ಸರ್‌: ಅಪಘಾತ ಅಥವಾ ಇನ್ನು ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭ ಸ್ವಯಂಚಾಲಿತ ಲಾಕ್‌ ಜಾಮ್‌ ಆಗಿದ್ದರೆ, ಚಾಲಕನ ಅಥವಾ ಕಾರಿನಲ್ಲಿರುವ ಇತರ ವ್ಯಕ್ತಿಗಳಿಗೆ ಹೊರ ಬರಲು ಅನುಕೂಲವಾಗುವಂತೆ ಬಾಗಿಲು ತೆಗೆಯುವಂಥ ವ್ಯವಸ್ಥೆ ಕೂಡ ಇರಲಿದೆ. ಇದರ ಜತೆಗೆ ಪಾರ್ಕಿಂಗ್‌ ಸಂದರ್ಭ ವಾಹನಗಳನ್ನು ರಿವರ್ಸ್‌ ತೆಗೆಯುವಾಗ ಉಂಟಾಗುವ ಅಪಘಾತ ತಪ್ಪಿಸಲು “ರಿವರ್ಸ್‌ ಸೆನ್ಸರ್‌’ಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅನುಮತಿ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹಗುರ ವಾಣಿಜ್ಯಿಕ ವಾಹನಗಳಲ್ಲಿ ಏರ್‌ಬ್ಯಾಗ್‌ ಮತ್ತು ರಿವರ್ಸ್‌ ಸೆನ್ಸರ್‌ ಪಾರ್ಕಿಂಗ್‌ ಅನ್ನು ಅಳವಡಿಸುವಂತೆ ಸೂಚಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ಹೇಳಿದ್ದಾರೆ. ಪಾರ್ಕಿಂಗ್‌ ಮಾಡುವ ವೇಳೆ ಉಂಟಾಗುವ ಅಪಘಾತ ತಪ್ಪಿಸಲು ಇದು ನೆರವಾಗುತ್ತದೆ. 

ಬಿಡುಗಡೆಗೆ ಮುನ್ನ ಪರೀಕ್ಷೆ: ಇಂಥ ನಿಯಮಗಳ ಜಾರಿಯಿಂದ ಕಾರುಗಳು ಮಾರುಕಟ್ಟೆಗೆ ಬರುವ ಮೊದಲು ವಿದೇಶಗಳಲ್ಲಿರುವಂತೆ ಎಷ್ಟು ಪ್ರಮಾಣದಲ್ಲಿ ಅಪಘಾತ ತಡೆಯಲು ಸಾಧ್ಯ ಎನ್ನುವುದನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಅದರಲ್ಲಿ ತೃಪ್ತಿದಾಯಕ ಫ‌ಲಿತಾಂಶ ಬಂದ ಬಳಿಕವೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next