Advertisement

ಏರ್‌ ಶೋ: ಮುಗಿಯದ ಗೊಂದಲ

06:00 AM Aug 05, 2018 | Team Udayavani |

ಬೆಂಗಳೂರು: ರಕ್ಷಣಾ ಕ್ಷೇತ್ರದ ಸುಧಾರಿತ ಉತ್ಪನ್ನಗಳ ಪ್ರದರ್ಶನ, ಹೊಸ ಸಂಶೋಧನೆಗಳ ಮಾಹಿತಿ ವಿನಿಮಯ ಹಾಗೂ ವ್ಯವಹಾರ ಉತ್ಪನ್ನಗಳ ಖರೀದಿ, ಮಾರಾಟಕ್ಕೆ ಸಾಕ್ಷಿಯಾಗುವ ಏರ್‌ಶೋ ಬೆಂಗಳೂರಿನಲ್ಲಿ ನಡೆಯುವುದೇ ಎಂಬ ಬಗ್ಗೆ ಮತ್ತೆ ಗೊಂದಲ ಉಂಟಾಗಿದೆ.

Advertisement

2017ರಲ್ಲಿ ವೈಮಾನಿಕ ಪ್ರದರ್ಶನ ನಡೆಯುವ ನಾಲ್ಕೈದು ತಿಂಗಳ ಮೊದಲೂ ಇದೇ ರೀತಿಯ ಗೊಂದಲ ಸೃಷ್ಟಿಯಾಗಿತ್ತು. ಅಂದಿನ ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪರಿಕ್ಕರ್‌ ಕೂಡ ಏರ್‌ ಶೋ ಗೋವಾಕ್ಕೆ ಸ್ಥಳಾಂತರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಅದು ಸಾಧ್ಯವಾಗಿರಲಿಲ್ಲ.

2019ರ ಆರಂಭದಲ್ಲಿ ನಡೆಯಲಿರುವ ಏರ್‌ಶೋ ಬೆಂಗಳೂರು ಬದಲಿಗೆ ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋ ಸಮೀಪದ ಬಕ್ಷಿ ಕಾ ತಾಲಾಬ್‌ ವಾಯುಸೇನೆ ನೆಲೆಗೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ರಕ್ಷಣಾ ಇಲಾಖೆ ಅಥವಾ ವಾಯು ಸೇನೆ ಯಾವುದೇ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿರುವ ಹೇಳಿಕೆ ಇನ್ನಷ್ಟು ಅನಿಶ್ಚಿತತೆ ಸೃಷ್ಟಿಸಿದೆ.

ಏರ್‌ಶೋ ಇತಿಹಾಸ: ಭಾರತೀಯ ಸೇನೆ, ರಕ್ಷಣಾ ವಸ್ತುಗಳ ಪ್ರದರ್ಶನಾ ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ಏರ್ಪಡಿಸುವ ಏರ್‌ಶೋಗೆ (ವೈಮಾನಿಕ ಪ್ರದರ್ಶನ) 22 ವರ್ಷಗಳ ಇತಿಹಾಸವಿದೆ. ಬೆಂಗಳೂರಿನ ಯಲಹಂಕದ ವಾಯುಸೇನೆ ನೆಲೆಯಲ್ಲಿ 1996ರಂದು ಮೊದಲ ಏರ್‌ಶೋ ನಡೆದಿತ್ತು. ಇದಾದ ನಂತರ 1998ರಲ್ಲಿ ನಡೆದಿದ್ದ ಏರ್‌ಶೋಗೆ ಅಂದಿನ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಚಾಲನೆ ನೀಡಿದ್ದರು. ನಂತರ 2001, 2003 ಹೀಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಫೆಬ್ರವರಿಯಲ್ಲಿ ಏರ್‌ಶೋ ನಡೆದುಕೊಂಡು ಬಂದಿದೆ. ಈವರೆಗೆ 11 ಏರ್‌ ಶೋ ಯಲಹಂಕದಲ್ಲೇ ನಡೆದಿದೆ. ಎಚ್‌ಎಎಲ್‌, ಡಿಆರ್‌ಡಿಒ, ಎಡಿಎ, ಬೆಲ್‌, ಎನ್‌ಎಎಲ್‌ ಸೇರಿ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಸಂಸ್ಥೆಗಳ ಜತೆಗೆ ಸ್ಟಾರ್ಟ್‌ಅಪ್‌ ಸಂಸ್ಥೆಗಳು ಭಾಗವಹಿಸಲಿವೆ.

ಬೆಂಗಳೂರಿನಲ್ಲಿ ಏರ್‌ಶೋಗೆ ಬೇಕಾದ ಎಲ್ಲ ವ್ಯವಸ್ಥೆಯೂ ಇದೆ ಮತ್ತು ವರ್ಷದಿಂದ ವರ್ಷ ಈ ಶೋ ವಿಶ್ವ ಮನ್ನಣೆ ಪಡೆಯುತ್ತಿದೆ. ಏರ್‌ಶೋಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಲಕ್ನೋದಲ್ಲಿ ವಾಯು ಸೇನೆ ನೆಲೆಯಿದೆ. ಆದರೆ, ದೇಶ, ವಿದೇಶದ ಯುದ್ಧ ವಿಮಾನ, ಹೆಲಿಕಾಪ್ಟರ್‌ ನಿಲುಗಡೆಗೆ ಬೇಕಾದ ಹ್ಯಾಂಗರ್‌ ವ್ಯವಸ್ಥೆಯಿಲ್ಲ. ಒಂದೊಮ್ಮೆ ಲಕ್ನೋಗೆ ಏರ್‌ಶೋ ಸ್ಥಳಾಂತರವಾದರೆ ಎಲ್ಲ ಮೂಲಸೌಕರ್ಯ ಹೊಸದಾಗಿಯೇ ಸೃಷ್ಟಿಸಬೇಕಾಗುತ್ತದೆ.

Advertisement

ಲಕ್ನೋಗೆ ಸ್ಥಳಾಂತರ ಬಗ್ಗೆ ತೀರ್ಮಾನಿಸಿಲ್ಲ: ಸಚಿವೆ ನಿರ್ಮಲಾ
ಬೆಂಗಳೂರು
: ಏರೋ ಇಂಡಿಯಾ-2019 ಪ್ರದರ್ಶನವನ್ನು ಎಲ್ಲಿ ಹಾಗೂ ಯಾವಾಗ ಆಯೋಜಿಸಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಏರೋ ಇಂಡಿಯಾ-2019 ಪ್ರದರ್ಶನ ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರವಾಗಲಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳು ನಮ್ಮಲ್ಲಿ ಏರೋ ಇಂಡಿಯಾ ಪ್ರದರ್ಶನ ಮಾಡಿ ಎಂದು ಮನವಿ ಮಾಡಿವೆ ಎಂದು ಹೇಳಿದರು. ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ಪ್ರದರ್ಶನ 1996 ರಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಏರೋ ಇಂಡಿಯಾ -2019 ಪ್ರದರ್ಶನ ಬೆಂಗಳೂರಿನಲ್ಲೇ ಆಯೋಜಿಸುವಂತೆ ನಾವು ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದೇವೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು. ಇಲ್ಲಿ ನಡೆಸಲು ಎಲ್ಲ ರೀತಿಯ ಸಹಕಾರ ರಾಜ್ಯ ಸರ್ಕಾರದಿಂದ ಇರುತ್ತದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next