ನವದೆಹಲಿ: ತೀವ್ರ ರೀತಿಯ ವಾಯು ಮಾಲಿನ್ಯದ ಪರಿಣಾಮದಿಂದಾಗಿ ದೆಹಲಿ-ಎನ್ ಸಿಆರ್ ಪ್ರದೇಶದ ಕೋಟ್ಯಂತರ ಜನರ ಬದುಕು ಮತ್ತು ಸಾವಿನ ಪ್ರಶ್ನೆ ಎದುರಿಸುವಂತಾಗಿದೆ. ವಾಯು ಮಾಲಿನ್ಯ ತಡೆಯಲು ವಿಫಲವಾಗಿದ್ದಕ್ಕೆ ಅಧಿಕಾರಿಗಳು ಹೊಣೆ ಹೊತ್ತುಕೊಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಚಾಟಿ ಬೀಸಿದೆ.
ಮಾಲಿನ್ಯದಿಂದಾಗಿಯೇ ಈ ರೀತಿ ಜನರು ಸಾಯಲು ಪರವಾನಿಗೆ ಕೊಡುತ್ತೀರಾ? ಇಲ್ಲವೇ ಈ ದೇಶ ನೂರು ವರ್ಷಗಳಷ್ಟು ಹಿಂದಕ್ಕೆ ಹೋಗಲು ಪರವಾನಿಗೆ ನೀಡುತ್ತೀರಾ? ಎಂದು ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಪೀಠ ಖಾರವಾಗಿ ಪ್ರಶ್ನಿಸಿದೆ.
ಈ ಸಮಸ್ಯೆಗೆ ಸರ್ಕಾರವನ್ನೇ ಹೊಣೆಗಾರರನ್ನಾಗಿಸಬೇಕಾಗಿದೆ ಎಂದು ಪೀಠ ಹೇಳಿದ್ದು, ಗೋಧಿ ಪೈರಿಗೆ ಬೆಂಕಿ ಹಚ್ಚುವುದನ್ನು ಸರ್ಕಾರ ಯಾಕೆ ನಿಲ್ಲಿಸಲಿಲ್ಲ ಎಂದು ಪ್ರಶ್ನಿಸುವ ಮೂಲಕ ದೆಹಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.
ನಿಮಗೆ ಜನರ ಬಗ್ಗೆ ಯಾವುದ ಕಾಳಜಿ ಇಲ್ಲವೆಂದಾದರೆ, ನಿಮಗೆ ಅಧಿಕಾರದಲ್ಲಿರಲು ಯಾವುದೇ ಹಕ್ಕೂ ಇಲ್ಲ ಎಂದು ಸುಪ್ರೀಂ ಪೀಠ ಹೇಳಿದ್ದು, ನಿಮಗೆ ದಂತದ ಗೋಪುರದಲ್ಲಿ ಕುಳಿತು ಆಡಳಿತ ನಡೆಸುವುದಷ್ಟೇ ಬೇಕಾಗಿದೆ. ನಿಮಗೆ ಜನರು ಸಾವನ್ನಪ್ಪುತ್ತಿದ್ದರೂ ಕೂಡಾ ನೀವು(ದಿಲ್ಲಿ ಸರ್ಕಾರ) ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ನೀವು(ರಾಜ್ಯಗಳು) ಸರ್ಕಾರದ ಅಭಿವೃದ್ಧಿಯ ಕಲ್ಪನೆಯನ್ನೇ ಮರೆತುಬಿಟ್ಟಿದ್ದೀರಿ. ನಿಮಗೆ ಬಡಜನರ ಬಗ್ಗೆ ಲಕ್ಷ್ಯವೇ ಇಲ್ಲ. ಇದು ನಿಜಕ್ಕೂ ದುರದೃಷ್ಟಕರ ಎಂದು ಸುಪ್ರೀಂ ಪೀಠದ ಜಸ್ಟೀಸ್ ದೀಪಕ್ ಗುಪ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.