ಹೊಸದಿಲ್ಲಿ: ದೇಶೀಯ ವಿಮಾನ ಯಾನ ಸಂದರ್ಭ ಪ್ರಯಾಣಿಕರ ಟಿಕೆಟ್‌ಗಳನ್ನು ಕಾಯ್ದಿರಿಸಿದ ದರ್ಜೆಗಿಂತ ಕೆಳದರ್ಜೆಗೆ ಇಳಿಸಿದ್ದರೆ ವಿಮಾನ ಯಾನ ಸಂಸ್ಥೆಗಳು ಟಿಕೆಟ್ ಶುಲ್ಕದ ಶೇ. 75 ವಾಪಸ್ ಮಾಡಬೇಕು ಎಂಬ ಹೊಸ ನಿಯಮವನ್ನು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪ್ರಕಟಿಸಿದೆ.
ಫೆ. 15ರಿಂದ ಈ ನಿಯಮ ಜಾರಿಗೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನ ಯಾನ ಟಿಕೆಟ್‌ಗಳನ್ನು ಕೆಳದರ್ಜೆಗೆ ಇಳಿಸಿದ್ದರೆ ನಿಗದಿತ ಪ್ರಯಾಣದ ದೂರವನ್ನು ಆಧರಿಸಿ ತೆರಿಗೆ ಸಹಿತ ಪ್ರಯಾಣ ಶುಲ್ಕದ ಶೇ. 30ರಿಂದ 75ರ ವರೆಗಿನ ಮೊತ್ತವನ್ನು ವಾಪಸ್ ನೀಡಬೇಕಾಗಿದೆ.
ಕಾಯ್ದಿರಿಸಿದ ಟಿಕೆಟ್‌ಗಳನ್ನು ಕೆಳದರ್ಜೆಗೆ ಇಳಿಸುತ್ತಿರುವ ಬಗ್ಗೆ ವಿಮಾನ ಪ್ರಯಾಣಿಕರ ದೂರು ಆಧರಿಸಿ ಈ ಹೊಸ ನಿಯಮಗಳನ್ನು ಜಾರಿಗೊಳಿಸ ಲಾಗುತ್ತಿದೆ ಎಂದು ಡಿಜಿಸಿಎ ಬುಧವಾರ ಪ್ರಕಟಿಸಿದೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ತೆರಿಗೆ ಸಹಿತ ಸಂಪೂರ್ಣ ಟಿಕೆಟ್ ವೆಚ್ಚ ಮರುಪಾವತಿಸಬೇಕು ಎಂದು ಕಳೆದ ಡಿಸೆಂಬರ್‌ನಲ್ಲಿ ಡಿಜಿಸಿಎ ಪ್ರಸ್ತಾವಿಸಿತ್ತು.
ಇದೀಗ ಅಂತಾರಾಷ್ಟ್ರೀಯ ಮಟ್ಟದ ನಿಯಮಗಳ ಅನ್ವಯ ಈ ಪ್ರಸ್ತಾವವನ್ನು ಪರಿಷ್ಕರಿಸಲಾಗಿದೆ.