Advertisement

ಕಾರಜೋಳ ಪುತ್ರನ ಅರೋಗ್ಯ ಸ್ಥಿತಿ ಗಂಭೀರ : ಚಿಕಿತ್ಸೆಗಾಗಿ ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ

10:16 PM Oct 18, 2020 | sudhir |

ಬೆಂಗಳೂರು: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಪುತ್ರ ಡಾ.ಗೋಪಾಲ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ತೀವ್ರ ತೊಂದರೆ ಉಂಟಾಗಿರುವುದರಿಂದ ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ.

Advertisement

ಸೆಪ್ಟಂಬರ್‌ 23 ರಿಂದ ಕೊರೊನಾ ಸೋಂಕಿಗೆ ತುತ್ತಾಗಿರುವ ಡಾ. ಗೋಪಾಲ ಕಾರಜೋಳ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಹೆಚ್ಚಿನ ಚಿಕಿತ್ಸೆಗೆ ಚೆನೈ ಅಥವಾ ಹೈದರಾಬಾದ್‌ಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಕಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದು, ಅವರ ಕಿರಿಯ ಸಹೋದರರಾದ ಡಾ. ಉದಯ ಕಾರಜೋಳ ಹಾಗೂ ಉಮೇಶ್‌ ಕಾರಜೋಳ ಕೂಡ ಅವರೊಂದಿಗೆ ತೆರಳಿದ್ದಾರೆ. ಆದರೆ, ಈಗ ಕೊರೊನಾ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದ್ದು, ಉಪ ಮುಖ್ಯಮಂತ್ರಿ ಕಾರಜೋಳ ಅವರ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಏರ್‌ ಲಿಫ್ಟ್ ಮೂಲಕ ಚೆನೈಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಗುವಾಹಟಿಯಲ್ಲಿ ವಿಜಯಪುರದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಸಾವು

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ, ಸಂಕಟಗಳು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದರ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ನನ್ನ ಪುತ್ರ ಡಾ. ಗೋಪಾಲ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮ ಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್‌ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದಲ್ಲಿ 8 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ. ಇಂತಹ ಗತ್ಯಂತರ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರ‌ ಸಲಹೆ ಇದೆ. ದೂರದ ಪ್ರಯಾಣ ನಿಶಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:ಶಂಕಿತ ಬೌಲಿಂಗ್‌ ಶೈಲಿ ಆರೋಪದಿಂದ ಸುನೀಲ್‌ ನಾರಾಯಣ್‌ ದೋಷಮುಕ್ತ: ನಿಟ್ಟುಸಿರುಬಿಟ್ಟ ಕೆಕೆಆರ್

ಪ್ರವಾಹ ಸಂತ್ರಸ್ಥರಿಗೆ ಜಿಲ್ಲಾಧಿಕಾರಿಗಳ ಮೂಲಕ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಮಾತುಗಳಿಂದ ಇಲ್ಲವೇ ಘೋಷಣೆಗಳಿಂದ ಅಥವಾ ಟೀಕೆ ಟಿಪ್ಪಣಿಗಳಿಂದ ಸಂತ್ರಸ್ತರ ಪರಿಹಾರ ಕಾರ್ಯ ಆಗಲಾರದು. ಅದಕ್ಕೆ ಬೇಕಾದುದು ಸರ್ಕಾರದ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಟೀಕೆ ಟಿಪ್ಪಣಿಗಳಿಗೆ ಮಾರುಹೋಗದೇ ಸರ್ಕಾರದ ವಿಶ್ವಾಸಾರ್ಹ ಕ್ರಮಗಳನ್ನು ಗಮನಿಸಬೇಕೆಂದು ಮನವಿ ಮಾಡುತ್ತೇನೆ.

ವರ್ತಮಾನದ ಒಂದು ಘಟನೆಯಿಂದಷ್ಟೇ ವ್ಯಕ್ತಿಯನ್ನು ಅಳೆಯಲು ಹೋಗಬಾರದು. ಹಿಂದಿನ ವಿದ್ಯಾಮಾನಗಳು ಈಗಿನ ಸ್ಥಿತಿಯನ್ನು ಗುರುತಿಸಲು ಯಾವತ್ತಿಗೂ ನಿರ್ಣಾಯಕ ಎಂಬುದು ನನ್ನ ತಿಳುವಳಿಕೆ. ಈ ಸಂದರ್ಭದಲ್ಲಿ ಪರಂಪರೆಯ ಬೆಳಕಿನಲ್ಲಿ ವರ್ತಮಾನದ ಕತ್ತಲನ್ನು ಓಡಿಸಿ ಭವಿಷ್ಯಕ್ಕೆ ಬೆಳಕನ್ನು ತರುವ ಕಡೆ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಮುನ್ನಡೆಯುವುದು ನಾನು ತೊಟ್ಟಿರುವ ಧೀಕ್ಷೆ. ಇದಕ್ಕೆ ಇಡೀ ಕರ್ನಾಟಕದ ಜನತೆಯ ಆರೈಕೆ, ಹಾರೈಕೆ ಅಗತ್ಯ ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next