ಬೆಂಗಳೂರು: ಸಾಮಾನ್ಯವಾಗಿ ಬೇಸಿಗೆ ಬೆನ್ನಲ್ಲೇ ಪಶ್ಚಿಮಘಟ್ಟ ಸೇರಿ ರಾಜ್ಯದ ಕೆಲವು ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ಅನಾಹುತಗಳನ್ನು ಎದುರಿಸಲು ಸರ್ಕಾರವು ಭಾರತೀಯ ವಾಯುಸೇನೆ ಮೊರೆಹೋಗಿದೆ.
ಈ ಸಂಬಂಧ ಈಗಾಗಲೇ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ವಾಯುಸೇನೆಯ ಬೆಂಗಳೂರಿನ ಟ್ರೈನಿಂಗ್ ಕಮಾಂಡ್ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ಬೆಂಕಿ ಅನಾಹುತಗಳನ್ನು ಕ್ಷಿಪ್ರಗತಿಯಲ್ಲಿ ನಂದಿಸಲು ಭಾರತೀಯ ವಾಯುಸೇನೆ ಮುನ್ನೆಚ್ಚರಿಕೆ ಕ್ರಮವಾಗಿ ಸಜ್ಜಾಗಿದೆ.
ಕರ್ನಾಟಕದಲ್ಲಿ ಕಳೆದ ಮೂರು ತಿಂಗಳಲ್ಲಿ ಸುಮಾರು 2,500ಕ್ಕೂ ಅಧಿಕ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿವೆ.
ಈಚೆಗೆ ಹಾಸನದ ಸಕಲೇಶಪುರದಲ್ಲಿ ಬೆಂಕಿ ನಂದಿಸುವಾಗ ಗಸ್ತು ಅರಣ್ಯ ಪಾಲಕರೊಬ್ಬರು ಸಾವನ್ನಪ್ಪಿದ್ದರು. ಇದೇ ರೀತಿ, ಬೆಳಗಾವಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬೆಂಕಿ ಅವಘಡಗಳು ವರದಿಯಾಗಿದ್ದವು. ಈ ಬೆಳವಣಿಗೆಗಳ ಬೆನ್ನಲ್ಲೇ ಸರ್ಕಾರ ಭಾರತೀಯ ವಾಯುಸೇನೆ ಮೊರೆಹೋಗಿದೆ ಎನ್ನಲಾಗಿದೆ.
Related Articles
ಒಂದು ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡರೆ, ತಕ್ಷಣ ಸ್ಥಳಕ್ಕೆ ಧಾವಿಸಿ ನಂದಿಸಲು ವಾಯುಸೇನೆ ತಂಡ ತಯಾರಿದೆ. ಅಷ್ಟೇ ಅಲ್ಲ, ಈ ಸಂಬಂಧದ ಕಾರ್ಯಾಚರಣೆಗೆ ಬಾಂಬಿ ಬಕೆಟ್‌ಗಳ ಸಹಿತ ಎಂಐ-17 ಹೆಲಿಕಾಪ್ಟರ್‌ಗಳನ್ನು ಕೂಡ ನಿಯೋಜಿಸಲು ಸಿದ್ಧತೆ ನಡೆದಿದೆ. ಆದರೆ, ಸದ್ಯಕ್ಕೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಯಾವುದೇ ಬೆಂಕಿ ಅನಾಹುತಗಳು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಪ್ರಧಾನ ಮುಖ್ಯ ಅರಣ್ಯ ಸರಂಕ್ಷಣಾಧಿಕಾರಿ (ವನ್ಯಜೀವಿ) ರಾಜೀವ್ ರಂಜನ್, “ರಾಜ್ಯದ ಯಾವುದೇ ಅರಣ್ಯ ಪ್ರದೇಶಗಳಲ್ಲಿ ದೊಡ್ಡಮಟ್ಟದ ಬೆಂಕಿ ಅನಾಹುತಗಳು ಕಂಡುಬಂದ ಬಗ್ಗೆ ವರದಿಯಾಗಿಲ್ಲ. ಸಣ್ಣಪುಟ್ಟ ಘಟನೆಗಳು ನಡೆದಿದ್ದರೂ, ಸ್ಥಳೀಯವಾಗಿಯೇ ನಿಯಂತ್ರಿಸುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ವಾಯುಸೇನೆ ನೆರವು ಕೋರಲಾಗಿದೆ. ಪೂರಕ ಸ್ಪಂದನೆಯೂ ದೊರಕಿದೆ’ ಎಂದು ಹೇಳಿದರು.
ವಾಯುಸೇನೆ ನೆರವು ಕೋರಿರುವುದು ಇದೇ ಮೊದಲಲ್ಲ. ಪ್ರತಿ ವರ್ಷದ ಸಾಮಾನ್ಯ ಪ್ರಕ್ರಿಯೆಯಾಗಿದೆ. 2017ರಲ್ಲಿ ಕಾಡ್ಗಿಚ್ಚು ನಂದಿಸುವಲ್ಲಿ ವಾಯುಸೇನೆ ಪ್ರಮುಖ ಪಾತ್ರ ವಹಿಸಿತ್ತು. ಹೀಗೆ ಪ್ರತಿ ವರ್ಷ ಮುನ್ನೆಚ್ಚರಿಕೆಯಾಗಿ ನೆರವಿಗೆ ಮನವಿ ಮಾಡಲಾಗುತ್ತದೆ. ಈಗಾಗಲೇ ಹಲವು ಸುತ್ತಿನ ಮಾತುಕತೆಯನ್ನೂ ವಾಯುಸೇನೆ ಅಧಿಕಾರಿಗಳೊಂದಿಗೆ ನಡೆದಿದೆ.
-ರಾಜೀವ್ ರಂಜನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)