Advertisement

ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಎಐಎಂಎಸ್‌ಎಸ್‌ ಮನವಿ

03:38 PM May 17, 2022 | Shwetha M |

ವಿಜಯಪುರ: ನಗರದಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಬಾಣಂತಿಯರ ಶಸ್ತ್ರಚಿಕಿತ್ಸೆ ಮಾಡಿದ ಲೋಪ ಪ್ರಕರಣ ಅತ್ಯಂತ ಆತಂಕಕಾರಿ ಸಂಗತಿ. ಕೂಡಲೇ ಈ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿ ಎಐಎಂಎಸ್‌ಎಸ್‌ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

Advertisement

ಸೋಮವಾರ ಸಂಘಟನೆಯ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮವರ ಅವರಿಗೆ ಮನವಿ ಸಲ್ಲಿಸಿದ ಮಹಿಳಾ ಸಂಘಟನೆ ಕಾರ್ಯಕರ್ತರು, ಮಾಧ್ಯಮದಲ್ಲಿ ವರದಿಯಾದಂತೆ ವಿಜಯಪುರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಶಸ್ತ್ರಚಿಕತ್ಸೆಯ ಬಳಿಕ ಹೊಲಿಗೆ ಬಿಚ್ಚಿಕೊಂಡು ಸಮಸ್ಯೆಯಾಗಿ ಬಾಣಂತಿಯರು ನರಳುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ದೇಹದ ಭಾಗದಲ್ಲಿ ಸೋಂಕು ತಗುಲಿ ಬಾಣಂತಿಯರು ನೋವಿನಿಂದ ನರಳುತ್ತಿರುವ ಘಟನೆ ಆಘಾತಕಾರಿ ವಿಷಯ ಎಂದು ಜಿಲ್ಲಾಡಳಿತಕ್ಕೆ ವಿವರಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರೇ ಹೆಚ್ಚಾಗಿ ಚಿಕಿತ್ಸೆ ಪಡೆಯುತ್ತಾರೆ. ಕೆಳ ಮಧ್ಯಮ ಹಾಗೂ ಕಡುಬಡವರು ಮಹಿಳೆಯರು ಹೆರಿಗೆ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಮೊರೆ ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಬಾಣಂತಿಯರಿಗೆ ಸರಿಯಾದ ಆರೈಕೆ, ಚಿಕಿತ್ಸೆ ಸಿಗದೆ ನೋವಿನಿಂದ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸದರಿ ಸಮಸ್ಯೆಗೆ ಶಸ್ತ್ರ ಚಿಕಿತ್ಸಾ ಘಟಕ ಒಂದೇ ಇರುವುದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಿ, ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಗರ್ಭಿಣಿಯರ ಆರೋಗ್ಯ ಸೇವೆಯಲ್ಲಿ ಬೇಜವಾಬ್ದಾರಿ ತೋರಿದವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ಸೋಂಕಿಗೊಳಗಾದ ಬಾಣಂತಿಯರ ಹೆಚ್ಚಿನ ವಿಶ್ರಾಂತಿ ಹಾಗೂ ಆರೈಕೆಗಾಗಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಮಹಿಳಾ ಸಂಘಟನೆ ಸಹ ಸಂಚಾಲಕಿ ಎಚ್‌. ಗೀತಾ, ಎಸ್‌ .ಬಿ. ಶಿವರಂಜನಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next