Advertisement

4 ಲಕ್ಷ ಜನರಿಗೆ ಸೌಲಭ್ಯ ತಲುಪಿಸುವ ಗುರಿ: ಡಾ|ಎಚ್‌.ಎಸ್‌. ಬಲ್ಲಾಳ್‌

07:00 AM Apr 05, 2018 | Team Udayavani |

ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ನ (ಮಾಹೆ) ಅತ್ಯಂತ ಪ್ರಮುಖ ಸಾಮಾಜಿಕ ಸೇವಾ ಯೋಜನೆಯಾಗಿ 18 ವರ್ಷಗಳ ಹಿಂದೆ ಆರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್‌ ಸೌಲಭ್ಯ ಪ್ರಸ್ತುತ 2.54 ಲಕ್ಷ ಜನರನ್ನು ತಲುಪಿದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು 4 ಲಕ್ಷ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದ್ದಾರೆ.

Advertisement

ಎ. 4ರಂದು ಮಣಿಪಾಲ ಕೆಎಂಸಿಯ ಡಾ| ಟಿ.ಎಂ.ಎ. ಪೈ ಆಡಿಟೋರಿಯಂನಲ್ಲಿ ಜರಗಿದ “ಮಣಿಪಾಲ್‌ ಆರೋಗ್ಯ ಕಾರ್ಡ್‌ ಮತ್ತು ಡೆಂಟಲ್‌ ಆರೋಗ್ಯ ಕಾರ್ಡ್‌ ಯೋಜನೆ – 2018’ರ ಚಾಲನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಈ ಯೋಜನೆಯು ದೇಶದ ವಿಮೆಯೇತರ ಮತ್ತು ಸರಕಾರೇತರ ಆರೋಗ್ಯ ಯೋಜನೆಗಳಲ್ಲಿ ಅತ್ಯಂತ ಯಶಸ್ವಿಯಾದುದಾಗಿದೆ. ಉಡುಪಿ, ಮಂಗಳೂರು, ದ.ಕ., ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉ.ಕ., ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು ಹಾಗೂ ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳು ಮಾತ್ರವಲ್ಲದೆ ಗೋವಾದ ಜನತೆ ಕೂಡ ಇದರ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಡಾ| ಬಲ್ಲಾಳ್‌ ತಿಳಿಸಿದರು.

ಆರೋಗ್ಯ ಕಾರ್ಡ್‌ ಪ್ರಯೋಜನ
ಮಣಿಪಾಲ್‌ ಆರೋಗ್ಯ ಕಾರ್ಡ್‌ನಿಂದ ವೈದ್ಯರ ಸಮಾಲೋಚನೆಯಲ್ಲಿ ಶೇ. 50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ. 30, ಸಾಮಾನ್ಯ ವಾರ್ಡ್‌ನಲ್ಲಿ ಒಳರೋಗಿಯಾಗಿ ದಾಖಲಾದರೆ ಶೇ. 25ರಷ್ಟು ರಿಯಾಯಿತಿ ಮೊದಲಾದ ಪ್ರಯೋಜನಗಳಿವೆ. ಕೆಎಂಸಿ ಮಣಿಪಾಲ, ಡಾ| ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ, ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಅತ್ತಾವರ ಮತ್ತು ಕೆಎಂಸಿ ಅಂಬೇಡ್ಕರ್‌ ಸರ್ಕಲ್‌ ಮಂಗಳೂರಿನಲ್ಲಿ ಈ ಸೌಲಭ್ಯ ದೊರೆಯುತ್ತದೆ. ಬಿಸಿಲು, ಮಳೆಯಿಂದ ರಕ್ಷಣೆ ನೀಡುವ ಕೊಡೆಯಂತೆಯೇ ಆರೋಗ್ಯ ಕಾರ್ಡ್‌ ನೆರವಾಗುತ್ತದೆ ಎಂದವರು ವಿವರಿಸಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದುರ್ಗಾಂಬಾ ಮೋಟರ್ನ ಚೇರ್‌ಮನ್‌ ಸದಾನಂದ ಚಾತ್ರ ಅವರು ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡ್‌ನಿಂದ ಕರಾವಳಿ ಮಾತ್ರವಲ್ಲದೆ ಇತರ ಜಿಲ್ಲೆಯವರಿಗೂ ಅನುಕೂಲವಾಗಿದೆ. ಮತ್ತಷ್ಟು ಜನರಿಗೆ ಈ ಸೌಲಭ್ಯ ದೊರೆಯುವಂತಾಗಲಿ ಎಂದು ಹೇಳಿದರು. 

ಡಾ| ಟಿ.ಎಂ.ಎ. ಪೈ ಆರೋಗ್ಯ ಸೇವಕ ಪ್ರಶಸ್ತಿ 
ಆರೋಗ್ಯ ಸೇವಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ತೊಡಗಿಕೊಂಡಿರುವ ಸೈಂಟ್‌ ಮಿಲಾಗ್ರಿಸ್‌ ಸೌಹಾರ್ದದ ಜಾರ್ಜ್‌ ಫೆರ್ನಾಂಡಿಸ್‌, ಶಿವಮೊಗ್ಗದ ಪತ್ರಕರ್ತ ಎನ್‌. ಮಂಜುನಾಥ್‌ ಮತ್ತು ಮಂಗಳೂರಿನ ಸತ್ಯಸೇವಾ ಸಮಿತಿಯ ಸುರೇಶ್‌ ಬೈಂದೂರು ಅವರಿಗೆ ಡಾ| ಟಿ.ಎಂ.ಎ. ಪೈ ಆರೋಗ್ಯ ಸೇವಕ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. 

Advertisement

ಮಾಹೆ ಕುಲಪತಿ ಡಾ| ಎಚ್‌. ವಿನೋದ್‌ ಭಟ್‌, ಸಹ ಉಪಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಮಣಿಪಾಲ ಕೆಎಂಸಿ ಡೀನ್‌ ಡಾ| ಪ್ರಜ್ಞಾ ರಾವ್‌, ಮಣಿಪಾಲ ಕೆಎಂಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಮಂಗಳೂರು ಕೆಎಂಸಿಯ ಸಹಾಯಕ ಡೀನ್‌ ಡಾ| ಉಣ್ಣಿಕೃಷ್ಣನ್‌, ಮಂಗಳೂರು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್‌ ವೇಣುಗೋಪಾಲ್‌, ಕೆಎಂಸಿಯ ಪ್ರಾದೇಶಿಕ ನಿರ್ವಹಣಾಧಿಕಾರಿ ಸಗೀರ್‌ ಸಿದ್ದಿಕಿ ಉಪಸ್ಥಿತರಿದ್ದರು. ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಸ್ವಾಗತಿಸಿದರು. ಕೃಷ್ಣಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು.

ತ್ರಿವಳಿ ಹೆತ್ತವರಿಗೆ ಮೊದಲ ಕಾರ್ಡ್‌!
ಮಣಿಪಾಲ್‌ ಆರೋಗ್ಯ ಕಾರ್ಡನ್ನು ತ್ರಿವಳಿ ಮಕ್ಕಳ ಹೆತ್ತವರಾದ ಹೆಬ್ರಿಯ ಶ್ರೀಪಾದ ಮತ್ತು ಉಷಾ ದಂಪತಿಗೆ ನೀಡಿ ಈ ವರ್ಷದ ಯೋಜನೆಗೆ ಚಾಲನೆ ನೀಡಲಾಯಿತು. 7 ವರ್ಷ ವಯಸ್ಸಿನ ತ್ರಿವಳಿಗಳಾದ ಸಂಜನಾ, ಸಿಂಜನಾ ಮತ್ತು ಸೃಜನಾ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿಯೇ ಜನಿಸಿದವರು ಎಂಬುದು ಇನ್ನೊಂದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next