Advertisement

ವಿಶ್ವಕಪ್ ನಲ್ಲಿ ಚಿನ್ನಕ್ಕೆ ಗುರಿ… ಪ್ಯಾರಾ ಒಲಿಂಪಿಕ್ಸ್‌ಗೆ ಹುಬ್ಬಳ್ಳಿಯ ಶ್ರೀಹರ್ಷ

12:13 PM Jul 02, 2022 | Team Udayavani |

ಹುಬ್ಬಳ್ಳಿ: ಜೂನ್‌ನಲ್ಲಿ ಫ್ರಾನ್ಸ್‌ನ ಶಾಥ್ರೋನಲ್ಲಿ ನಡೆದ ಪ್ಯಾರಾಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕಗಳಿಸಿರುವ ಇಲ್ಲಿನ ಅಕ್ಷಯ ಕಾಲೋನಿ ನಿವಾಸಿ ಶ್ರೀಹರ್ಷ ದೇವರಡ್ಡಿ(41) 2024ರ ಪ್ಯಾರಿಸ್‌ ಪ್ಯಾರಾಒಲಿಂಪಿಕ್ಸ್‌ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಪ್ಯಾರಾಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದೇಶದ ಎರಡನೇ ಕ್ರೀಡಾಳು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

Advertisement

ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ 10 ಮೀಟರ್‌ ಆರ್‌4 ರೈಫಲ್‌ ಸ್ಟಾಂಡಿಂಗ್‌ SH2 ನಲ್ಲಿ 253.1 ಅಂಕಗಳೊಂದಿಗೆ ಚಿನ್ನದ ಪದಕ ಪಡೆಯುವ ಮೂಲಕ 2024ರ ಪ್ಯಾರಿಸ್‌ ಪ್ಯಾರಾಒಲಿಂಪಿಕ್ಸ್‌ಗೆ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಜರ್ಮನಿ ಮಿನಿಕ್‌ನಲ್ಲಿ ಜು.12-20ರ ವರೆಗೆ “ಮಿನಿಕ್‌ 2022′ ವರ್ಲ್ಡ್ ಶೂಟಿಂಗ್‌ ಪ್ಯಾರಾ ಸ್ಫೋರ್ಟ್ಸ್ ವರ್ಲ್ಡ್ ಕಪ್, ಆ. 15-25ರ ವರೆಗೆ ದಕ್ಷಿಣ ಕೋರಿಯಾ ಶಾಂಗವಾನ್‌ ಸಿಟಿಯಲ್ಲಿ ವರ್ಲ್ಡ್ ಶೂಟಿಂಗ್‌ ಪ್ಯಾರಾ ಸ್ಫೋರ್ಟ್ಸ್ ನಂತರ ನವೆಂಬರ್‌ನಲ್ಲಿ ದುಬೈನಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀಹರ್ಷ ದೇವರೆಡ್ಡಿ ಅವರ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ನಿತಿನ ಗಡ್ಕರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆಲ್ಲರೂ ಟ್ವೀಟ್‌ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಸಹ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ನನ್ನ ಸಾಧನೆಗೆ ಕಾರಣವಾಗಿದೆ ಎಂದು ಶ್ರೀಹರ್ಷ ದೇವರಡ್ಡಿ ಹೇಳುತ್ತಾರೆ.

ಬೆನ್ನುಹುರಿ ಘಾಸಿಗೊಳಿಸಿದ ಅಪಘಾತ
2013ರಲ್ಲಿ ಎಸ್‌ಡಿಎಂ ಬಳಿ ರಸ್ತೆ ಅಪಘಾತದಲ್ಲಿ ಬೆನ್ನುಹುರಿ ಗಾಯಗೊಂಡು ಡಿಸೈಬಲ್‌ ಆದರು. ಅದಕ್ಕೂ ಮೊದಲು ಬಜಾಜ್‌ ಅಲಾಯನ್ಸ್‌ನಲ್ಲಿ ಏರಿಯಾ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಪಘಾತದ ನಂತರ ದೇಶಪಾಂಡೆ ಫೌಂಡೇಶನ್‌ನಲ್ಲಿ ಕೆಲಸ ನಿರ್ವಹಿಸಿದ ಶ್ರೀಹರ್ಷ ಅವರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅದರಲ್ಲೇ ಏನಾದರೂ ಸಾಧನೆ ಮಾಡಬೇಕೆಂದು ಮುಂದಾಗಿದ್ದಾರೆ.

ಮಗನನ್ನು ದಾಖಲಿಸಲು ಹೋದವರು ತಾವೇ ಸೇರಿದರು!
2017ರಲ್ಲಿ ಹುಬ್ಬಳ್ಳಿ ಶೂಟಿಂಗ್‌ ಅಕಾಡೆಮಿಗೆ ತಮ್ಮ ಮಗನ ಹೆಸರು ದಾಖಲು ಮಾಡಲು ಹೋದಾಗ ತಮ್ಮ ಹೆಸರನ್ನೂ ದಾಖಲಿಸಿ ತರಬೇತಿಗೆ ಅಣಿಯಾಗಿದ್ದರು. ನಂತರ ಉತ್ತಮ ತರಬೇತಿ ಸೌಲಭ್ಯಗಳನ್ನು ಪಡೆಯಲು ಬೆಂಗಳೂರಿಗೆ ಸ್ಥಳಾಂತರಗೊಂಡು ಅಲ್ಲಿ ಹೆಚ್ಚಿನ ತರಬೇತಿ ಪಡೆದು ಮುಂದೆ ದೆಹಲಿಯಲ್ಲಿ ಹೆಚ್ಚಿನ ತರಬೇತಿಗೆ ಮುಂದಾದರು.ಬೆಂಗಳೂರಿನಲ್ಲಿ ಶೂಟರ್‌ ರಾಕೇಶ ಮನ್ಪತ್‌ ಅವರಲ್ಲಿ ಒಂದು ವರ್ಷ ಮಾರ್ಗದರ್ಶನ ನಂತರ ದೆಹಲಿಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಜೆ.ಪಿ. ನೌಟಿಯಾಲ್‌ ಮಾರ್ಗದರ್ಶನದಲ್ಲಿ ತರಬೇತಿ ಮುಂದುವರಿಸಿದ್ದಾರೆ.

Advertisement

ಟ್ರಿಗರ್‌ ಒತ್ತುವುದೂ ಕಷ್ಟಕರವಾಗಿತ್ತು..
ಅಂಗವಿಕಲರು ಮತ್ತು ಬೆನ್ನುಹುರಿಯ ಗಾಯದಿಂದ ಬಾಧಿತರಾದವರಿಗೆ ಮೀಸಲಾದ ಖಏ2 ವರ್ಗದ ಅಡಿಯಲ್ಲಿ ತರಬೇತಿ ನೀಡಲು ಶ್ರೀಹರ್ಷ ದೇವರಡ್ಡಿ ಅವರಿಗೆ ಸಲಹೆ ನೀಡಲಾಯಿತು. ನನ್ನ ಕೈಗಳಿಗೆ ಯಾವುದೇ ಶಕ್ತಿ ಇಲ್ಲದ ಕಾರಣ ಟ್ರಿಗರ್‌ಅನ್ನು ಒತ್ತುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಆದಾಗ್ಯೂ, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿಯ ಮಾರ್ಗಸೂಚಿಗಳಲ್ಲಿನ ಸಾಮ್ಯತೆ ಮತ್ತು ವಿಸ್ತರಣೆಗಳು ಮತ್ತು ಸ್ಪ್ರಿಂಗ್‌ಸ್‌ ಸ್ಟ್ಯಾಂಡ್ ಗಳ ಬಳಕೆಗೆ ನಿಬಂಧನೆಯು ನನಗೆ ಸಹಾಯ ಮಾಡಿತು ಎಂದರು ಶ್ರೀಹರ್ಷ ದೇವರಡ್ಡಿ.

ಸಾಧನೆಗಳು
2017-18ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಶಾರ್ಜಾದಲ್ಲಿ ನಡೆದ IWAS (ಅಂತಾರಾಷ್ಟ್ರೀಯ ವೀಲ್‌ಚೇರ್‌ ಆಂಪ್ಯೂಟಿ ಸ್ಪೋರ್ಟ್ಸ್) ವರ್ಲ್ಡ್ ಗೈಮ್ಸ್ 2019ರಲ್ಲಿ ಎರಡು ಬೆಳ್ಳಿ ಪದಕ, ಜುಲೈ 2019ರಲ್ಲಿ ಕ್ರೊವೇಷಿಯಾದ ಒಸಿಜೆಕ್‌ನಲ್ಲಿ ನಡೆದ ವಿಶ್ವ ಶೂಟಿಂಗ್‌ ಪ್ಯಾರಾ ಸ್ಪೋರ್ಟ್ಸ್ (WSPS) ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು, ಅದೇ ವರ್ಷ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಗಖಕಖ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತೀಯ ತಂಡದ ಭಾಗವಾಗಿ ಅರ್ಹತೆ ಪಡೆದಿದ್ದರು. ಶ್ರೀಹರ್ಷ ದೇವರಡ್ಡಿ ಅವರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಆಯ್ಕೆ ಮಾಡಿದ್ದು, ಪ್ರಮಾಣೀಕೃತ ಪ್ಯಾರಾ ಶೂಟರ್‌ ಕೂಡ ಆಗಿದ್ದಾರೆ.

ಆರಂಭದಿಂದ ತಂದೆ-ತಾಯಿ ಅವರ ಪಿಂಚಣಿಯಲ್ಲಿ ತರಬೇತಿ ಪಡೆದಿದ್ದು, ತಂದೆ-ತಾಯಿಯ ಸಹಕಾರದಿಂದ ಶೂಟಿಂಗ್‌ ಮಾಡುತ್ತಿದ್ದೇನೆ. ಕೇಂದ್ರ ಸರಕಾರದಿಂದ ಕ್ರೀಡೆಗೆ ಉತ್ತಮ ಸಹಕಾರ ಸಿಗುತ್ತಿದೆ. ಒಲಿಂಪಿಕ್‌ ಗೋಲ್ಡ್‌ ಕ್ವಸ್ಟ್‌ ಅವರಿಂದ ಉತ್ತಮ ಸಹಕಾರ ಸಿಗುತ್ತಿದ್ದು, ಅವರೆಲ್ಲರ ಸಹಕಾರದಿಂದ ಪ್ಯಾರಾ ಒಲಿಂಪಿಕ್‌ 2024ರಲ್ಲಿ ಚಿನ್ನದ ಪದಕ ಪಡೆಯುವುದೇ ಮುಂದಿನ ಗುರಿಯಾಗಿದೆ.
ಶ್ರೀಹರ್ಷ ದೇವರೆಡ್ಡಿ, ಪ್ಯಾರಾ ಶೂಟರ್‌

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next