ಹೈದರಾಬಾದ್: 2012ರಲ್ಲಿ ಎಐಎಂಐಎಂ ವರಿಷ್ಠ ಅಸಾದುದ್ದೀನ್ ಒವೈಸಿ ಸಹೋದರ, ತೆಲಂಗಾಣ ಶಾಸಕ ಅಕ್ಬರುದ್ದೀನ್ ಒವೈಸಿ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣದ ಎರಡು ಪ್ರಕರಣಗಳಲ್ಲಿ ಖುಲಾಸೆಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿಧವಾ ವೇತನ ವಂಶವೃಕ್ಷ ಪ್ರಮಾಣ ಪತ್ರಕ್ಕೆ ಲಂಚ ಸ್ವೀಕಾರ: ಕಂದಾಯ ನಿರೀಕ್ಷಕ ಬಂಧನ
ಯಾವುದೇ ಭಾಷಣದಲ್ಲಿಯೂ ಕೋಮುಪ್ರಚೋದನೆ ನೀಡುವಂತಹ ಅಂಶಗಳು ಇದ್ದಿರಲಿಲ್ಲವಾಗಿತ್ತು ಎಂದು ಪ್ರಾಸಿಕ್ಯೂಷನ್ ಕೋರ್ಟ್ ಗೆ ಸಲ್ಲಿಸಿರುವ ಸಾಕ್ಷಿಗಳ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಕೋಮು ಪ್ರಚೋದನೆ ಭಾಷಣ ಮಾಡಿರುವುದಾಗಿ ಆರೋಪಿಸಿ ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ಶಾಸಕ ಅಕ್ಬರುದ್ದೀನ್ ಒವೈಸಿ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಹೈದರಾಬಾದ್ ನ್ಯಾಂಪಲ್ಲಿ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು.
ಎರಡು ಧರ್ಮಗಳ ನಡುವೆ ಕೋಮು ಭಾವನೆ ಕೆರಳಿಸುವ ಮತ್ತು ಕ್ರಿಮಿನಲ್ ಸಂಚು ನಡೆಸಿರುವ ಆರೋಪದಲ್ಲಿ 2012ರಲ್ಲಿ ಅಕ್ಬರುದ್ದೀನ್ ವಿರುದ್ಧ ನಿಜಾಮಾಬಾದ್ ಮತ್ತು ನಿರ್ಮಲ್ ಪ್ರದೇಶದಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರತಿ ಪ್ರಕರಣದಲ್ಲಿಯೂ 30ಕ್ಕೂ ಹೆಚ್ಚು ಸಾಕ್ಷಿಗಳ ವಿವರಣೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆಯುವ ಮೊದಲು ಅಕ್ಬರುದ್ದೀನ್ ಒವೈಸಿ 40ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಇದ್ದಿರುವುದಾಗಿ ವರದಿ ವಿವರಿಸಿದೆ.
ತನ್ನ ಸಹೋದರನ ವಿರುದ್ಧದ ಆರೋಪವನ್ನು ಸಂಸದ, ಎಐಎಂಐಎಂ ವರಿಷ್ಠ ಅಸಾದುದ್ದೀನ್ ಒವೈಸಿ ಅಲ್ಲಗಳೆದಿದ್ದರು. ಇಂದು ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಹೈದರಾಬಾದ್ ನ ಹಳೇ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.