Advertisement

ಶಾಲಾ ಆವರಣದಲ್ಲಿ 5 ಸಾವಿರ ಸಸಿ ಬೆಳೆಸುವ ಗುರಿ

12:14 PM Jul 15, 2019 | Suhan S |

ಕೆ.ಆರ್‌.ಪೇಟೆ: ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿರುವ ಹೆಣ್ಣುಮಕ್ಕಳಿಗೆ ಪಾಠದ ಜೊತೆಯಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸಿ ಎರಡೇ ವರ್ಷದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಬೆಳೆಸುವ ಮೂಲಕ ಇತರೆ ಶಾಲೆಗಳಿಗೂ ಮಾದರಿಯಾಗಿದ್ದಾರೆ.

Advertisement

ತಾಲೂಕಿನ ಶೆಟ್ಟಿನಾಯಕನಕೊಪ್ಪಲು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 250 ಹೆಣ್ಣು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರ, ವೃಕ್ಷ ಸಂರಕ್ಷಣೆ ಕುರಿತು ಪ್ರಾಯೋಗಿ ಕವಾಗಿ ಬೋಧಿಸಲಾಗುತ್ತಿದೆ. ಒಂದು ಮಗುವಿಗೆ ಕನಿಷ್ಟ 4 ಸಸಿ ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಮಕ್ಕಳು ಅವರವರ ಸಸಿಗಳನ್ನು ಒಬ್ಬರಿಗಿಂತ ಒಬ್ಬರು ಕಾಳಜಿಯಿಂದ ಬೆಳೆಸುವ ಜವಾಬ್ದಾರಿ ಹೊತ್ತಿದ್ದಾರೆ.

ಸಾವಯವ ಗೊಬ್ಬರ: ಇಲ್ಲಿ ಮತ್ತೂಂದು ವಿಶೇಷವೆಂದರೆ ಮಕ್ಕಳು ಸಸಿಗಳಿಗೆ ಸಾವಯವ ಗೊಬ್ಬರವನ್ನೇ ಹಾಕುತ್ತಿರುವುದು ಗಮನಾರ್ಹ. ಜೊತೆಗೆ ಪ್ರತಿದಿನ ನೀರನ್ನು ಹಾಕಿ ಅತೀವ ಕಾಳಜಿ ವಹಿಸಿದ್ದು ಶಾಲಾ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ವಾಸ್ತವ್ಯ ಇದ್ದು ಬೆಳಗ್ಗೆ ಎದ್ದ ತಕ್ಷಣ ಸಸಿಗಳ ಪೋಷಣೆಗೆಂದೇ 30 ನಿಮಿಷ ಮೀಸಲಿಡುತ್ತಾರೆ.

ಹಣ್ಣು, ತರಕಾರಿ, ಹೂವು: 10 ಎಕರೆ ವಿಶಾಲವಾದ ಮೈದಾನದಲ್ಲಿ ಹೊಂಗೆ, ಬಾದಾಮಿ, ಅರಳಿ, ಮಾವು ಸೇರಿ ನೇರಳೆ ಹಣ್ಣಿನ 1500 ಸಸಿಗಳ ಜೊತೆಯಲ್ಲಿ ಪ್ರತಿದಿನ ಶಾಲೆಯಲ್ಲಿ ಅಡುಗೆಗೆ ಅಗತ್ಯವಾದ ತೊಗರಿ, ಟೊಮೆಟೋ, ಹಸಿಮೆಣಸಿನಕಾಯಿ, ಸೊಪ್ಪು ಮತ್ತಿತರ ಪೌಷ್ಟಿಕಾಂಶವುಳ್ಳ ಹಸಿರು ತರಕಾರಿ ಬೆಳೆದು ಮಕ್ಕಳ ಊಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ 200 ಬಾಳೆ ಗಿಡ ಬೆಳೆಯಲಾಗಿದೆ. ಅವುಗಳನ್ನು ಮಕ್ಕಳೇ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹೂವಿನ ಗಿಡಗಳು ಶಾಲೆ ಸೌಂದರ್ಯ ಹೆಚ್ಚಿಸಿವೆ. ಒಟ್ಟಾರೆ ಶಾಲಾ ಆವರಣದಲ್ಲಿ 2 ಸಾವಿರ ಮರಗಿಡಗಳು ಬೆಳೆಯುತ್ತಿವೆ. ಮಕ್ಕಳಿಗೆ ಪರಿಶುದ್ಧ ಗಾಳಿ ಮತ್ತು ನೆರಳು ಸಿಗುತ್ತಿದೆ.

ಸ್ವಾಗತಿಸುವ ಹುಲ್ಲುಹಾಸು: ಸಾಮಾನ್ಯವಾಗಿ ನಾವು ಸರ್ಕಾರಿ ಶಾಲೆಗಳಿಗೆ ಹೋದರೆ ಶಾಲೆ ನಾಮಫ‌ಲಕ ಮತ್ತು ಅದರ ಮುಂದೆ ನಿಲ್ಲಿಸಿರುವ ವಾಹನ ಅಥವಾ ಒಂದೆರಡು ಮರಗಳು ನಮ್ಮನ್ನು ಸ್ವಾಗತಿಸುವುದೇ ಹೆಚ್ಚು. ಆದರೆ, ಈ ಶಾಲೆಯ ಆವರಣ ಪ್ರವೇಶಿಸಿದರೆ ನಮಗೆ ಶಾಲೆಗೆ ಬಂದ ಅನುಭವದ ಬದಲು ನಾವೊಂದು ಸುಂದರವಾದ ಉದ್ಯಾನವನದಲ್ಲಿದ್ದೇವೆ ಎಂಬ ಅನುಭವವಾಗುತ್ತದೆ. ಶಾಲೆ ಮುಂದೆ ಹಸಿರಿನಿಂದ ಕಂಗೊಳಿಸುವ ಹುಲ್ಲಿನ ಹಾಸು, ಅದಕ್ಕೆ ಹೊಂದುವಂತೆ ಸುಂದರ ಹೂವು ಮತ್ತು ಎಲೆ ಹೊಂದಿರುವ ಅಲಂಕಾರಿಕ ಸಸಿಗಳು ನಮ್ಮನ್ನು ಸ್ವಾಗತಿಸುತ್ತವೆ. ಜೊತೆಗೆ ಶಾಲೆಯ ಸುತ್ತ ಇರುವ ಮರಗಳ ಕೆಳಗೆ ವಿಶ್ರಾಂತಿ ಪಡೆಯಲು ಕಲ್ಲಿನ ಆಸನ ನಿರ್ಮಿಸಲಾಗಿದೆ.

Advertisement

 

● ಎಚ್.ಬಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next