Advertisement

ಕನಿಷ್ಟ 3 ಲಕ್ಷ ಗಿಡ ನೆಡುವ ಗುರಿ

09:15 AM Jun 14, 2020 | Suhan S |

ಶಿವಮೊಗ್ಗ: ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಕೆರೆಗಳ ಸುತ್ತ ಕನಿಷ್ಟ 3ಲಕ್ಷ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Advertisement

ಅವರು ಶನಿವಾರ ವೀರಣ್ಣನಬೆನವಳ್ಳಿ ಗ್ರಾಮದ ಕೆರೆ ದಂಡೆಯಲ್ಲಿ ಸಸಿಗಳನ್ನು ನೆಟ್ಟು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಂತರ್ಜಲ ಚೇತನ ಯೋಜನೆಯಡಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದೀಗ ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆರೆಗಳ ಸುತ್ತ 1ಸಾವಿರ ಸಸಿಗಳನ್ನು ನೆಡುವ ಕಾರ್ಯವನ್ನು ಆರಂಭಿಸಲಾಗಿದೆ. ಇದರಿಂದ ಕೆರೆಗಳಿಗೆ ಗಡಿಗಳನ್ನು ಗುರುತಿಸಿ ಒತ್ತುವರಿ ತಡೆಯಲು ಸಾಧ್ಯವಿದೆ ಎಂದು ಹೇಳಿದರು.

ನಗರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವುಗೊಳಿಸಲಾಗುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಡಲು ಈಗಾಗಲೇ ಸೂಚಿಸಲಾಗಿದ್ದು, ಅದರಂತೆ ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇಸಾಯಿ ಮಾತನಾಡಿ, ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ 77ಹೆಕ್ಟೇರ್‌ ಬ್ಲಾಕ್‌ ನೆಡುತೋಪಲ್ಲಿ 84,700 ಗಿಡಗಳನ್ನು, 55 ಕಿಮಿ ರಸ್ತೆ ಬದಿ ನೆಡುತೋಪಲ್ಲಿ 15ಸಾವಿರ ಸಸಿಗಳನ್ನು ಮತ್ತು ಕೃಷಿ ಅರಣ್ಯ ಕಾರ್ಯಕ್ರಮದಡಿಯಲ್ಲಿ ರೈತರ ಜಮೀನಿನಲ್ಲಿ 466 ಹೆಕ್ಟೇರ್‌ ವಿಸ್ತೀರ್ಣದಲ್ಲಿ 3.69ಲಕ್ಷ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್‌. ವೈಶಾಲಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕನಿಷ್ಟ 1ಸಾವಿರ ಸಸಿಗಳನ್ನು ನೆಡಲು ಈಗಾಗಲೇ ಸೂಚನೆ ನೀಡಲಾಗಿದೆ. ಮಹಾತ್ಮಾ ಗಾಂಧಿ  ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯೀಕರಣ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನೆಡಲಾಗಿರುವ ಸಸಿಗಳನ್ನು ಸರಿಯಾಗಿ ನಿರ್ವಹಿಸುವುದು ಸಹ ಗ್ರಾಮ ಪಂಚಾಯತ್‌ ಜವಾಬ್ದಾರಿಯಾಗಿದ್ದು, ಸಾರ್ವಜನಿಕರ ಸಹಕಾರ ಅತಿ ಅಗತ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next