Advertisement

ಐಕಳ ಹರೀಶ್‌ ಶೆಟ್ಟಿ ಒಕ್ಕೂಟವನ್ನು ಉತ್ತುಂಗಕ್ಕೆ ಬೆಳೆಸಿದ್ದಾರೆ: ಪದ್ಮನಾಭ ಎಸ್‌. ಪಯ್ಯಡೆ

02:52 PM Sep 08, 2021 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ವಾರ್ಷಿಕ ಬಹಿರಂಗ ಅಧಿವೇಶನ ಸಮಾರಂಭವು ಸೆ. 5ರಂದು ಅಪರಾಹ್ನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿತು.

Advertisement

ಸಮಾರಂಭದಲ್ಲಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ, ಉದ್ಯಮಿ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಮಾಲಿನಿ ಪಿ. ಪಯ್ಯಡೆ, ಒಕ್ಕೂಟದ ಕಾರ್ಯದರ್ಶಿ, ಸಮಾಜ ಸೇವಕ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಶ್ವೇತಾ ಜೆ. ಶೆಟ್ಟಿ ದಂಪತಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ, ಸಮ್ಮಾನ ಪತ್ರ, ಬೃಹದಾಕಾರದ ಹೂವಿನ ಹಾರ ತೊಡಿಸಿ ಸಮ್ಮಾನಿಸಲಾಯಿತು. ಬಂಟರ ಸಂಘದ ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಇಂದ್ರಾಳಿ ಕುಟುಂಬ ಹಾಗೂ ಸಂಘದ ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ ಉಪಸ್ಥಿತರಿದ್ದರು.

ಖ್ಯಾತ ಯಕ್ಷಗಾನ ಭಾಗವತ, ಪಟ್ಲ ಫೌಂಡೇಶನ್‌ ರೂವಾರಿ, ಪಾವಂಜೆ ಯಕ್ಷಗಾನ ಮೇಳದ ಸ್ಥಾಪಕ ಪಟ್ಲ ಸತೀಶ್‌ ಶೆಟ್ಟಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಗೊಂಡ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಮತ್ತು ಚಿತ್ರಾ ಜೆ. ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪ ಹಾರದೊಂದಿಗೆ ಗೌರವಿಸಲಾಯಿತು. ಬಂಟರ ಸಂಘದ ಜತೆ ಕೋಶಾಧಿಕಾರಿ ಸಿಎ ಹರೀಶ್‌ ಶೆಟ್ಟಿ, ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬಂಟರವಾಣಿಯ ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮನಾಭ ಎಸ್‌. ಪಯ್ಯಡೆ, ತಟಸ್ಥವಾಗಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪುನರ್ಜನ್ಮ ನೀಡಿದ ಐಕಳ ಹರೀಶ್‌ ಶೆಟ್ಟಿಯವರು ಒಕ್ಕೂಟವನ್ನು ಅತೀ ಎತ್ತರಕ್ಕೆ ಬೆಳೆಸಿದ್ದಾರೆ. ನನ್ನನ್ನು ಗುರುತಿಸಿ ಸಮ್ಮಾನಿಸಿದ ಒಕ್ಕೂಟದ ಎಲ್ಲ ಕಾರ್ಯಕರ್ತ ರಿಗೂ ಕೃತಜ್ಞತೆಗಳು ಎಂದರು.

ಇದನ್ನೂ ಓದಿ:ವೈರಲ್ ವೀಡಿಯೋ | ಹಜೀಬ್ ಇಲ್ಲದ ಮಹಿಳೆ, ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ : ತಾಲಿಬಾನ್ ಉಗ್ರ

Advertisement

ಇನ್ನೋರ್ವ ಸಮ್ಮಾನಿತ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕರ್ತವ್ಯವನ್ನು ಪ್ರಮಾಣಿಕವಾಗಿ ಮಾಡಿದ್ದೇನೆ. ಒಕ್ಕೂಟದ ಪ್ರೀತಿ, ವಿಶ್ವಾಸಕ್ಕೆ ಕೃತಜ್ಞನಾಗಿರುವೆ ಎಂದು ಅವರು ತಿಳಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಪಟ್ಲ ಸತೀಶ್‌ ಶೆಟ್ಟಿ ಅವರು, ಕ್ಲಿಷ್ಟಕರ ಸಂದರ್ಭದಲ್ಲೂ ಅದ್ಭುತ ಕಾರ್ಯಕ್ರಮ ನಡೆದಿದೆ. ನನ್ನಿಂದ ಸಮಾಜದ ಋಣ ತೀರಿಸಲು ಸಾಧ್ಯವಾಗದು. ಆಶೀರ್ವಾದದ ನೆಲೆಯಲ್ಲಿ, ಸತ್ಯದ ದಾರಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.

ಜಗನ್ನಾಥ ಶೆಟ್ಟಿ ಬಾಳ ಅವರು ಗೌರವ ಸ್ವೀಕರಿಸಿ, ಪತ್ರಕರ್ತರಿಗೆ ಗೌರವ ನೀಡುವ ನಿಮ್ಮ ಸಹೃದಯತೆಗೆ ತಲೆಬಾಗುವೆ. ಮುಂಬಯಿ ಪತ್ರಕರ್ತ ಮಿತ್ರರನ್ನು ಈ ಸಂದರ್ಭ ಅಭಿನಂದಿಸುತ್ತಿದ್ದೇನೆ ಎಂದರು.

ಇತ್ತೀಚೆಗೆ ನಿಧನ ಹೊಂದಿದ ಯಕ್ಷಗಾನದ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ ಅವರು ಮಾತೋಶ್ರೀ ಅಪ್ಪಿ ಶೆಟ್ಟಿ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೊಟ್ಟಿಕೆರೆ ಪುರುಷೋ ತ್ತಮ ಪೂಂಜಾ ಅವರ ಮಾನಿಷಾದ ಪ್ರಸಂಗದ ಕನಸು ಭಾವದ ಧ್ವನಿಯು ಹಾಡನ್ನು ಪಟ್ಲ ಸತೀಶ್‌ ಶೆಟ್ಟಿ ಹಾಡಿ ನುಡಿನಮನ ಸಲ್ಲಿಸಿದರು.

ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಮುಖ್ಯ ಅತಿಥಿಯಾಗಿ ಆರ್ಗಾನಿಕ್‌ ಕೆಮಿಕಲ್ಸ್‌ನ ತೋನ್ಸೆ ಆನಂದ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್‌ ದಾಸ್‌ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಸತೀಶ್‌ ಅಡಪ್ಪ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಬಂಟ ಸಂಘಟನೆಗಳ ಪದಾಧಿ ಕಾರಿಗಳು, ಬಂಟರ ಸಂಘ ಮುಂಬಯಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಧಿವೇಶನವನ್ನು ಅಶೋಕ್‌ ಪಕ್ಕಳ ನಿರ್ವಹಿಸಿದರು. ಕಾರ್ಯಕ್ರಮ ಸಮಿತಿಯ ಸದಸ್ಯರು, ಬಂಟರ ಸಂಘದ ಮಹಾ ಪ್ರಬಂಧಕ ಪ್ರವೀಣ್‌ ಶೆಟ್ಟಿ ಮತ್ತು ಸಿಬಂದಿ ಸಹಕರಿಸಿದರು.

ಚಿತ್ರ-ವರದಿ: ಪ್ರೇಮ್‌ನಾಥ್‌ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next