ಹೊಸದಿಲ್ಲಿ: ಕೆಲ ವಿದ್ಯಾರ್ಥಿಗಳು ಪ್ರದರ್ಶಿಸಿದ ರಾಮಲೀಲಾ ಸ್ಕಿಟ್‌ನ ವಿಡಿಯೋ ಕ್ಲಿಪ್‌ಗಳು ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಈ ಕುರಿತಾಗಿ ಏಮ್ಸ್ ವಿದ್ಯಾರ್ಥಿ ಸಂಘ ಭಾನುವಾರ ಕ್ಷಮೆಯಾಚಿಸಿದೆ .
ಹಾಸ್ಯರೂಪದಲ್ಲಿ ರಾಮಾಯಣದ ಕೆಲವು ಪಾತ್ರಗಳಿಗೆ ಆಧುನಿಕ ಟಚ್ ನೀಡಿ ಈ ಸ್ಕಿಟ್ ಅನ್ನು ದಸರಾ ಸಂದರ್ಭದಲ್ಲಿ ಕೆಲವು ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಏಮ್ಸ್ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಬಳಿ ಪ್ರದರ್ಶಿಸಿದ್ದರು.
ರಾಮಲೀಲಾ ಸ್ಕಿಟ್‌ನ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
‘ವಿದ್ಯಾರ್ಥಿಗಳ ಪರವಾಗಿ, ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲದ ಈ ಸ್ಕಿಟ್ ನಡೆಸಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ಅಂತಹ ಯಾವುದೇ ಚಟುವಟಿಕೆ ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ಏಮ್ಸ್ ವಿದ್ಯಾರ್ಥಿ ಸಂಘ ಟ್ವೀಟ್ ಮಾಡಿದೆ.
‘ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದೇವೆ, ಸಮಸ್ಯೆಯ ಸೂಕ್ಷ್ಮತೆಯನ್ನು ಅರಿತುಕೊಂಡ ವಿದ್ಯಾರ್ಥಿಗಳು ಕ್ಷಮೆಯಾಚಿಸಿದ್ದಾರೆ’ ಎಂದು ಏಮ್ಸ್ ಆಡಳಿತ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ. ‘ಇಂತಹ ಘಟನೆ ಮರುಕಳಿಸುವುದಿಲ್ಲ’ ಎಂದು ಅವರು ಭರವಸೆ ನೀಡಿದ್ದಾರೆ. ‘ಸ್ಕಿಟ್ ಯಾವುದೇ ಅಧಿಕೃತ ಚಟುವಟಿಕೆ ಅಥವಾ ಈವೆಂಟ್‌ನ ಭಾಗವಲ್ಲ ಮತ್ತು ವಿದ್ಯಾರ್ಥಿಗಳು ಅದನ್ನು ಸ್ವಂತವಾಗಿ ಆಯೋಜಿಸಿದ್ದಾರೆ’ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.