ವಿಜಯಪುರ: ನವದೆಹಲಿಯ ಏಮ್ಸ್ (AIIMS) ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ಎದುರಿಸಿದ್ದ ವಿಜಯಪುರ ಜಿಲ್ಲೆಯ ದಿವ್ಯಾ ಅರವಿಂದ ಹಿರೊಳ್ಳಿ ದೇಶಕ್ಕೆ ಮೊದಲ ರ್‍ಯಾಂಕ್ ಮೂಲಕ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ನವೆಂಬರ್ 20 ರಂದು ನಡೆದಿದ್ದ ಏಮ್ಸ್ ಪ್ರವೇಶ ಪರೀಕ್ಷಾ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಪ್ರಕಟಿತ ಪರೀಕ್ಷಾ ಫಲಿತಾಂಶದಲ್ಲಿ ಡಿಎಂ–ಜನರಲ್ ಕ್ರಿಟಿಕಲ್ ಕೇರ್ ಮೆಡಿಷಿನ್ ವಿಭಾಗ (DM- GENERAL CRITICAL CARE MEDICINE) ದಲ್ಲಿ ವಿಜಯಪುರ ವೈದ್ಯಕೀಯ ವಿದ್ಯಾರ್ಥಿನಿ ದಿವ್ಯಾ ಅರವಿಂದ ಹಿರೊಳ್ಳಿ ಎಂಬ ವಿದ್ಯಾರ್ಥಿನಿಯೇ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ದಿವ್ಯಾ ಹಿರೊಳ್ಳಿ ಶೇ 67.08 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿರುವ ಅರವಿಂದ ಹಿರೊಳ್ಳಿ ಅವರ ಪುತ್ರಿಯಾಗಿರುವ ದಿವ್ಯಾ ಅವರು ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ 2012 ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದ ದಿವ್ಯಾ2016 ರಲ್ಲಿ, ಹುಬ್ಬಳ್ಳಿ ಕಿಮ್ಸ್‌ನಲ್ಲಿ ಎಂಡಿ ಪದವಿ ಪಡೆದಿದ್ದರು. ಬಳಿಕ ಪಾಂಡಿಚೇರಿ ಜಿಪ್‌ಮೇರ್ (JIPMER) ನಲ್ಲಿ ಫೆಲೋಶಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಫೆಲೊಶಿಪ್ ಇನ್ ನಿರೊ ಕ್ರಿಟಿಕಲ್ ಕೇರ್ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದಿವ್ಯಾ, ನನ್ನ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶ ನಿರೀಕ್ಷಿತವಾಗಿ ಮೊದಲ ರ್ಯಾಂಕ್ ಬಂದಿದೆ. ಫಲಿತಾಂಶ ನನ್ನಲ್ಲಿನ ಆತ್ಮವಿಶ್ವಾಸವನ್ನು ಇನ್ನಷ್ಟು ವೃದ್ಧಿಸಿದೆ. ಇದಕ್ಕಾಗಿ ನನಗೆ ಆಗಿರುವ ಸಂತಸ ಅವರ್ಣನೀಯ ಎಂದಿದ್ದಾರೆ.
ಮೂರು ವರ್ಷಗಳ ಏಮ್ಸ್ ಕೋರ್ಸ್ ಸಂಪೂರ್ಣ ಉಚಿತವಾಗಿದೆ. ಭವಿಷ್ಯದಲ್ಲಿ ಕ್ರಿಟಿಕಲ್ ಕೇರ್‌ನಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ನನಗೆ ಹೆಚ್ಚಿನ ನೆರವಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.