Advertisement

ಸಾಲ ತಂದಾದರೂ ರೈತರಿಗೆ ನೆರವು: ಸಿಎಂ

10:11 AM Jan 28, 2020 | Lakshmi GovindaRaj |

ಮೈಸೂರು: “ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕೃಷಿ ಮೇಳ ಮತ್ತು ವಸ್ತುಪ್ರದರ್ಶನಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಟ್ಟು ರೈತ ನೆಮ್ಮದಿ, ಸ್ವಾಭಿಮಾನದಿಂದ ಬದುಕುವ ದಿನ ತರುತ್ತೇನೆ. ಜಾತಿ, ಕುಲ, ಪಕ್ಷ ಭೇದವಿಲ್ಲದೇ ರೈತನ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆಂದು ಅಭಯ ನೀಡಿದರು.

ನಾನು ಸಿಎಂ ಆದ ನಾಲ್ಕಾರು ದಿನದಲ್ಲೇ 110 ವರ್ಷಗಳ ನಂತರ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿವೆ. ಜತೆಗೆ ಸಾಕಷ್ಟು ಹಾನಿಯೂ ಸಂಭವಿಸಿತ್ತು. 7 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿತ್ತು. ಕಾನೂನನ್ನು ನೋಡದೆ ರೈತರಿಗೆ ಪರಿಹಾರ ನೀಡಿದ್ದೇವೆ. ಎನ್‌ಡಿಆರ್‌ಎಫ್ ಜತೆಗೆ ರಾಜ್ಯ ಸರ್ಕಾರ ಕೂಡ ನೆರವು ನೀಡಿದ್ದು, ನಮ್ಮದು ರೈತಪರ ಸರ್ಕಾರ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.

ಕೃಷಿ ಮತ್ತು ಕೈಗಾರಿಕೆ ಎರಡೂ ಕ್ಷೇತ್ರಗಳನ್ನೂ ಒಟ್ಟಾಗಿ ತೆಗೆದುಕೊಂಡು ರಾಜ್ಯ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರಲ್ಲದೆ, ಎಸ್‌.ಎಂ.ಕೃಷ್ಣ ಸರ್ಕಾರದ ನಂತರ 16 ವರ್ಷಗಳ ಬಳಿಕ ಇತ್ತೀಚೆಗೆ ದಾವೋಸ್‌ಗೆ ಹೋದಾಗ ದೊಡ್ಡ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸಿದ್ದು, ಮೈಸೂರು, ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಭಾಗಗಳಲ್ಲಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿ ಬಂದಿದ್ದೇನೆ.

ಮುಂದಿನ 4-6 ತಿಂಗಳಲ್ಲಿ ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದರು. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾಗ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿನ ಕೆರೆ ಹೂಳು ತೆಗೆದು ರಸ್ತೆಗಳನ್ನು ಎತ್ತರಿಸಲು ಹಣ ನೀಡುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದರು.

Advertisement

ಸುತ್ತೂರು ಶ್ರೀ ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮರಳಗವಿ ಮಠದ ಮುಮ್ಮಡಿ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಉಪಸ್ಥಿತರಿದ್ದರು.

ಸಿಎಂ ಬಿಎಸ್‌ವೈ ಗುಣಗಾನ ಮಾಡಿದ ಜಿ.ಟಿ. ದೇವೇಗೌಡ
ಮೈಸೂರು: ಯಡಿಯೂರಪ್ಪ ಅಗ್ನಿಪರೀಕ್ಷೆ ಎದುರಿಸಿ ಪರಿಶ್ರಮದಿಂದ ಅಧಿಕಾರ ಹಿಡಿದಿದ್ದಾರೆ. ಹೀಗಾಗಿ ಅಧಿಕಾರಾವಧಿ ಪೂರ್ಣಗೊಳಿಸಲು ವಿರೋಧಪಕ್ಷಗಳು ಸಹಕಾರ ನೀಡಬೇಕೆಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ಬಿಎಸ್‌ವೈ ಅವ ರನ್ನು ಗುಣ ಗಾನ ಮಾಡಿದರು. ಕೃಷಿ ಮೇಳ ಮತ್ತು ವಸ್ತುಪ್ರದರ್ಶನಗಳ ಸಮಾ ರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜನರ ಸಂಕಷ್ಟದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳು ಟೀಕೆ ಮಾಡುವು ದನ್ನು ಬಿಟ್ಟು ಆಡಳಿತ ಪಕ್ಷಕ್ಕೆ ಸಹಕಾರ ನೀಡಬೇಕು. ಜನರ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಲ್ಲಬೇಕೆಂದು ಹಾಡಿ ಹೊಗಳಿದರು.

ಸಾಲು ಮರದ ತಿಮ್ಮಕ್ಕಗೆ ಅಭಿನಂದನೆ: ಸಾಲುಮರದ ತಿಮ್ಮಕ್ಕನನ್ನು ಅಭಿನಂದಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಕ್ರಾಂತಿಕಾರಕ ಕೆಲಸ ಮಾಡಿರುವ ಸಾಲುಮರದ ತಿಮ್ಮಕ್ಕನಿಗೆ ತಮ್ಮ ಸರ್ಕಾರ 2 ಕೋಟಿ ಧನ ಸಹಾಯ ಮಾಡಿದ್ದು, ತೆರಿಗೆ ಕಳೆದು ಅವರ ಖಾತೆಗೆ 1.37 ಕೋಟಿ ರೂ. ಜಮೆಯಾಗಿದೆ. ಜತೆಗೆ ವಸತಿ ಇಲಾಖೆಯಿಂದ ಬೆಂಗಳೂರಲ್ಲಿ 50 ಲಕ್ಷ ರೂ. ವೆಚ್ಚದ ಮನೆ ಕಟ್ಟಿಸಿಕೊಟ್ಟಿರುವುದಾಗಿ ಹೇಳಿದರು.

ಸದ್ಯದಲ್ಲೇ ಕಿಸಾನ್‌ ಸಮ್ಮಾನ್‌ 2ನೇ ಕಂತು: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯ ಸರ್ಕಾರ ಕೂಡ 4 ಸಾವಿರ ರೂ. ಸೇರಿಸಿ ಕೊಡುತ್ತಿದ್ದು, ಈಗಾಗಲೇ ಮೊದಲ ಕಂತು ರೈತರಿಗೆ ತಲುಪಿಸಿದ್ದೇವೆ. ಸದ್ಯದಲ್ಲೇ ಎರಡನೇ ಕಂತಿನ ಹಣ ತಲುಪಲಿದೆ. ಭತ್ತಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಜತೆಗೆ ನಮ್ಮ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿಯಾಗಿ 200 ರೂ. ಘೋಷಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next