Advertisement

ಎಐಸಿಸಿ ಅಧ್ಯಕ್ಷ ಚುನಾವಣೆ: ದಿಗ್ವಿಜಯ್‌ ವರ್ಸಸ್‌ ತರೂರ್‌

02:07 PM Sep 29, 2022 | Team Udayavani |

ನವದೆಹಲಿ/ತಿರುವನಂತಪುರಂ:ರಾಜಸ್ಥಾನ ರಾಜಕೀಯದಲ್ಲಿ ಸಂಚಲನವೆದ್ದ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಈಗ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಎಂಟ್ರಿ ಪಡೆದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದ್ದು, ಶುಕ್ರವಾರವೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಬೆಳವಣಿಗೆಯ ಪ್ರಕಾರ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸಂಸದ ಶಶಿತರೂರ್‌ ಮತ್ತು ದಿಗ್ವಿಜಯ್‌ ನಡುವೆ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾಗಿದೆ. ಕಳೆದ ಶುಕ್ರವಾರ ಜಬಲ್ಪುರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ದಿಗ್ವಿಜಯ್‌ ಅವರು, “ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ನಾಯಕತ್ವದ ಸೂಚನೆಯನ್ನು ಪಾಲಿಸುತ್ತೇನೆ’ ಎಂದಿದ್ದರು. ಬುಧವಾರ ಮತ್ತೆ ಈ ಬಗ್ಗೆ ಪ್ರಶ್ನಿಸಿದಾಗ, “ನಾನು ಈ ವಿಚಾರವನ್ನು ಯಾರ ಬಳಿಯೂ ಚರ್ಚಿಸಿಲ್ಲ.

ಹೈಕಮಾಂಡ್‌ನಿಂದ ಅನುಮತಿಯನ್ನೂ ಕೇಳಿಲ್ಲ. ನಾನು ಸ್ಪರ್ಧಿಸುತ್ತೇನೋ, ಇಲ್ಲವೋ ಎನ್ನುವುದನ್ನು ನನಗೇ ಬಿಟ್ಟುಬಿಡಿ’ ಎಂದಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ರೇಸ್‌ನಿಂದ ಹೊರಬಿದ್ದ ಕಾರಣ, ದಿಗ್ವಿಜಯ್‌ ಅವರು ಸ್ಪರ್ಧಿಸಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ.

ಆ್ಯಂಟನಿ – ಸೋನಿಯಾ ಭೇಟಿ:
ರಾಜಸ್ಥಾನ ಬಿಕ್ಕಟ್ಟು ಎಐಸಿಸಿ ಅಧ್ಯಕ್ಷ ಚುನಾವಣೆ ಮೇಲೆ ಕರಾಳ ಛಾಯೆ ಬೀರಿರುವಂತೆಯೇ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೆ.30 ನಾಮಪತ್ರ ಸಲ್ಲಿಕೆಯ ಕೊನೇ ದಿನವಾಗಿರುವ ಕಾರಣ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಚುನಾವಣೆ ಕುರಿತು ಚರ್ಚಿಸಿರಬಹುದು ಎನ್ನಲಾಗಿದೆ.

ತರೂರ್‌ ಶಾಯರಿ:
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಶಶಿ ತರೂರ್‌ ಬುಧವಾರ ಉರ್ದು ಕವಿ ಸುಲ್ತಾನ್‌ಪುರಿ ಅವರ ಶಾಯರಿಯೊಂದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. “ನಾನು ಏಕಾಂಗಿಯಾಗಿ ಪಯಣ ಆರಂಭಿಸಿದ್ದೆ. ಒಬ್ಬೊಬ್ಬರಾಗಿ ಅದರಲ್ಲಿ ಸೇರತೊಡಗಿ, ಈಗ ಅದು ದೊಡ್ಡ ಸಮೂಹವಾಗಿ ಮಾರ್ಪಟ್ಟಿದೆ’ ಎಂದು ಆ ಕವಿತೆಯಲ್ಲಿದೆ. ನಾಮಪತ್ರ ಸಲ್ಲಿಸಲಿರುವ ತಮಗೆ ದೊಡ್ಡಮಟ್ಟದ ಬೆಂಬಲವಿದೆ ಎಂದು ಅವರು ಈ ಮೂಲಕ ಪರೋಕ್ಷವಾಗಿ ಹೇಳಿದ್ದಾರೆ.

Advertisement

ರಾಹುಲ್‌ರನ್ನು ಕಂಡು ಖುಷಿಯಿಂದ ಕಣ್ಣೀರಿಟ್ಟಳು!
ಭಾರತ್‌ ಜೋಡೋ ಯಾತ್ರೆಯ 18ನೇ ದಿನವಾದ ಬುಧವಾರ ರಾಹುಲ್‌ ಗಾಂಧಿ ಅವರು ಕೇರಳದ ಪಾಡಿಯ ಪಾಂಡಿಕ್ಕಾಡ್‌ ಶಾಲೆಯಿಂದ ನಡಿಗೆ ಆರಂಭಿಸಿದ್ದಾರೆ. ಈ ವೇಳೆ, ಅಲ್ಲಿಗೆ ಬಂದಿದ್ದ ಬಾಲಕಿಯೊಬ್ಬಳು, ರಾಹುಲ್‌ರನ್ನು ನೋಡುತ್ತಲೇ ಅತೀವ ಖುಷಿಯಿಂದ ಕಣ್ಣೀರಿಟ್ಟ ಘಟನೆ ನಡೆಯಿತು. ಅಳಲು ಆರಂಭಿಸಿದ ಅವಳನ್ನು ರಾಹುಲ್‌ ಆಲಿಂಗಿಸಿಕೊಂಡು ಸಂತೈಸಿದ್ದೂ ಕಂಡುಬಂತು.

ನನಗಂತೂ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ. ಮುಂದಿನ ವರ್ಷವೇ ಮಧ್ಯಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆ ಇರುವ ಕಾರಣ, ನಾನು ರಾಜ್ಯದ ಕಡೆಗೆ ಗಮನ ಹರಿಸಬೇಕಿದೆ.
– ಕಮಲ್‌ನಾಥ್‌, ಮಧ್ಯಪ್ರದೇಶ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next